ADVERTISEMENT

ಕಲಬುರ್ಗಿ: ಬಾವಿಯಲ್ಲಿ ಮಹಿಳಾ‌ ಪೊಲೀಸ್ ಕಾನ್‌ಸ್ಟೆಬಲ್ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 15:07 IST
Last Updated 30 ಆಗಸ್ಟ್ 2020, 15:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕುಟುಂಬವೊಂದು ದುರಂತ ಅಂತ್ಯ ಕಂಡಿದ್ದು, ಪತಿ ಆತ್ಮಹತ್ಯೆಗೆ ಶರಣಾದ ಎರಡೂವರೆ ತಿಂಗಳಲ್ಲೇ ಪತ್ನಿ, ಗುಪ್ತಚರ ವಿಭಾಗದ ಮಹಿಳಾ ಕಾನ್‌ಸ್ಟೆಬಲ್ ಸುರೇಖಾ ಬಿರಾದಾರ (33) ಮೃತರಾಗಿದ್ದು, ಯಡ್ರಾಮಿ ಪಟ್ಟಣದ ಬಾವಿಯೊಂದರಲ್ಲಿ ಇವರ ಮೃತ ದೇಹ ಪತ್ತೆಯಾಗಿದೆ.

ಇವರ ಪತಿ ಮಲ್ಲಿನಾಥ ಬಿರಾದಾರ ಜೂ.12ರಂದು ಆತ್ಮಹತ್ಯೆಗೆ ಶರಣಾಗಿದ್ದರು. ನಗರದ ರೋಜಾ ಪೊಲೀಸ್ ಠಾಣೆಯಲ್ಲಿ‌ ಹೆಡ್‌ ಕಾನ್‌ಸ್ಟೆಬಲ್ ಆಗಿದ್ದ ಮಲ್ಲಿನಾಥ ಪೊಲೀಸ್ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಪತ್ನಿ ಸುರೇಖಾ ಮಾನಸಿಕವಾಗಿ ತೀವ್ರ ನೊಂದುಕೊಂಡಿದ್ದರು.

ಭಾನುವಾರ ಸಂಜೆ ಸಂಶಯಾಸ್ಪದವಾಗಿ ಮೃತ ದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡಿದೆ. ಸ್ಥಳಕ್ಕೆ ಯಡ್ರಾಮಿ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದಾರೆ.

ADVERTISEMENT

ಸುರೇಖಾ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದವರು. 2007ರಲ್ಲಿ ಸುರೇಖಾ ಪೊಲೀಸ್ ಸೇವೆಗೆ ಸೇರಿದ್ದರು. ಆಳಂದ ತಾಲ್ಲೂಕಿನ ಕವಲಗಾ ಗ್ರಾಮದ ಮಲ್ಲಿನಾಥ 2008ರಲ್ಲಿ ಸೇವೆಗೆ ಸೇರಿದ್ದರು. ಈ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.