ADVERTISEMENT

ಕೈಕೊಟ್ಟ ಪ್ರಿಯಕರನ ಥಳಿಸಿದ ಯುವತಿ

ಮದುವೆಯಾಗುವುದಾಗಿ ನಂಬಿಸಿ ಊರಿಗೆ ವಾಪಸಾಗಿದ್ದ ಯುವಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 7:27 IST
Last Updated 20 ಸೆಪ್ಟೆಂಬರ್ 2021, 7:27 IST

ಕಲಬುರ್ಗಿ: ಮದುವೆಯಾಗುವುದಾಗಿ ಭರವಸೆ ನೀಡಿ ಕೈಕೊಟ್ಟು ಸ್ವಗ್ರಾಮ ಕಲಬುರ್ಗಿ ತಾಲ್ಲೂಕಿನ ಪಟ್ಟಣಕ್ಕೆ ಬಂದಿದ್ದ ಯುವಕನನ್ನು ಬೆಂಗಳೂರಿನಿಂದ ಹುಡುಕಿಕೊಂಡ ಯುವತಿ ಇಲ್ಲಿನ ಗ್ರಾಮೀಣ ಠಾಣೆ ಎದುರೇ ಭಾನುವಾರ ಥಳಿಸಿದ್ದಾಳೆ. ಈ ಕುರಿತ ವಿಡಿಯೊ ವೈರಲ್ ಆಗಿದೆ.

ಪಟ್ಟಣದ ನಿವಾಸಿ ಇರ್ಫಾನ್ ಎಂಬಾತ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಯುವತಿಯೊಂದಿಗೆ ಸ್ನೇಹ ಸಂಪಾದಿಸಿದ್ದ. ನಂತರ ಪ್ರೀತಿಗೆ ತಿರುಗಿತ್ತು. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದರು.

ಲಾಕ್‌ಡೌನ್‌ ಇದ್ದುದರಿಂದ ಊರಿಗೆ ವಾಪಸಾಗಿದ್ದ ಇರ್ಫಾನ್ ವಾಪಸ್ ಬೆಂಗಳೂರಿಗೆ ಹೋಗಿರಲಿಲ್ಲ. ಆದರೆ, ಈತನಿಗಾಗಿ ಕಾಯುತ್ತಿದ್ದ ಯುವತಿ ಹುಡುಕಿಕೊಂಡು ಕಲಬುರ್ಗಿಗೆ ಬಂದಿದ್ದಳು.

ADVERTISEMENT

‘ಮದುವೆಯಾಗು ಎಂದಾಗ ನನ್ನ ನಡತೆ ಸರಿ ಇಲ್ಲ’ ಎಂದು ಹೇಳಿದ ಎಂದು ರೊಚ್ಚಿಗೆದ್ದ ಯುವತಿ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಲು ಗ್ರಾಮೀಣ ಪೊಲೀಸ್ ಠಾಣೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಇರ್ಫಾನ್ ಬಂದಾಗ ಸಿಟ್ಟಿಗೆದ್ದ ಯುವತಿ ನಡತೆ ಸರಿ ಇಲ್ಲ ಎನ್ನುತ್ತೀಯಾ ಎಂದು ಥಳಿಸುತ್ತಿರುವುದು ವಿಡಿಯೊದಲ್ಲಿದೆ.

ಈ ಬಗ್ಗೆ ಇಬ್ಬರನ್ನೂ ಪೊಲೀಸರು ಕರೆಸಿ ಮಾತನಾಡಿದರು. ದೂರು ನೀಡಲು ಮಹಿಳಾ ಠಾಣೆಗೆ ಕಳುಹಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.