ADVERTISEMENT

ಕಲಬುರಗಿ | ‘ಮಹಿಳೆಯರ ಸ್ವಾವಲಂಬಿ ಬದುಕಿಗೆ ‘ಗ್ಯಾರಂಟಿ’

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:15 IST
Last Updated 30 ಜುಲೈ 2025, 5:15 IST
<div class="paragraphs"><p>ಕಲಬುರಗಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು </p></div>

ಕಲಬುರಗಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು

   

ಕಲಬುರಗಿ: ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡಿ, ಆರ್ಥಿಕ ಸಮಾನತೆ ಹಾಗೂ ಸ್ವಾವಲಂಬಿಗಳಾಗಿ ಮಾಡಲು ಪ್ರಯತ್ನಿಸಿ, ಯಶಸ್ಸು ಕಂಡಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಐಟಿ–ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.

ಇಲ್ಲಿನ ಸೇಡಂ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತೆಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಗ್ಯಾರಂಟಿಗಳನ್ನು ನೀಡಿ ಮಹಿಳೆಯರಿಗೆ ಸೌಲಭ್ಯ ಒದಗಿಸಿದ್ದೇವೆ. ಇದರಿಂದ ಮಹಿಳೆಯರು ಪ್ರತಿ ತಿಂಗಳು ₹8 ಸಾವಿರದಿಂದ ₹10 ಸಾವಿರ ಉಳಿತಾಯ ಮಾಡುತ್ತಿದ್ದಾರೆ. ಆದರೆ, ವಿಪಕ್ಷಗಳು ಜನರಿಗೆ ನೀಡಿದ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಾರೆ’ ಎಂದರು.

‘ಬಿಜೆಪಿ ಅವರಿಗೆ ಮನೆ ಉದ್ಧಾರ ಮಾಡಿದ್ದು ಗೊತ್ತಿಲ್ಲ, ಹಾಳು ಮಾಡುವುದು ಮಾತ್ರ ಗೊತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹52 ಸಾವಿರ ಕೋಟಿ ಅನುದಾನ ನೀಡಿ, ಮಹಿಳೆಯರ ಕುಟುಂಬಗಳ ನಿರ್ವಹಣೆಗೆ ಆಶ್ರಯವಾಗಿದೆ. ಜಾತಿ, ಧರ್ಮ, ಮತ ಪಂಥ ನೋಡದೇ ಎಲ್ಲರಿಗೂ ಗ್ಯಾರಂಟಿ ಹಣ ನೀಡುತ್ತಿದೆ’ ಎಂದರು.

‘ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯವರು ದೇವರಲ್ಲಿ ಹೋಗಿ ಅಂತ ಹೇಳಿದರೆ ಯಾರೂ ಹೋಗುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರಿಗೆ ಶಕ್ತಿ ಹಾಗೂ ಭಕ್ತಿ ಎರಡೂ ಸಿಗುತ್ತಿದೆ. ಇದರಿಂದ ದೇವಾಲಯ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಜೊತೆಗೆ ಅರ್ಚಕರ ತಟ್ಟೆಯೂ ಭರ್ತಿಯಾಗುತ್ತಿದೆ’ ಎಂದರು.

‘ಗ್ಯಾರಂಟಿಯಿಂದ ಸ್ವಾಭಿಮಾನ ಬದುಕು, ಆರ್ಥಿಕ ಸಮಾನತೆ ಸಿಗುತ್ತಿದೆ. ಅದನ್ನು ನಾವು ಮರೆಯಬಾರದು. ಕಾಂಗ್ರೆಸ್‌ ಪಕ್ಷದ ನಿಲುವಿನಿಂದ ಎಲ್ಲರಿಗೂ ಅವಕಾಶಗಳು ಸಿಕ್ಕಿವೆ. ನಮ್ಮಲ್ಲಿ ಆಚಾರ, ವಿಚಾರ, ಸಿದ್ಧಾಂತ ಇದೆ. ಆದರೆ, ಪ್ರಚಾರ ಮಾತ್ರ ಇಲ್ಲ. ಎಲ್ಲ ಮಹಿಳೆಯರು ನಾವು ಮಾಡಿದ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮಾತನಾಡಿ, ‘ಗ್ಯಾರಂಟಿಯಿಂದ ಮಹಿಳೆಯರ ಜೀವನ ಬದಲಾಗಿದೆ. ಸರ್ಕಾರ ನೀಡಿದ ಹಣದಲ್ಲಿ ಅವರ ದಿನನಿತ್ಯದ ಖರ್ಚಿನ ಜೊತೆಗೆ ಹಣ ಉಳಿತಾಯ ಮಾಡಿ ಸಣ್ಣ ಪ್ರಮಾಣದ ವ್ಯಾಪಾರ ಮಾಡಿಕೊಂಡು ಆರ್ಥಿಕರಾಗಿ ಸಬಲರಾಗುತ್ತಿದ್ದಾರೆ. ಆದರೆ, ಮಹಿಳೆಯರೂ ಎಲ್ಲ  ಜವಾಬ್ದಾರಿಯನ್ನು ವಹಿಸಿಕೊಂಡು ಆರೋಗ್ಯವಾಗಿ ಇರಬೇಕಿದೆ’ ಎಂದರು.

‘ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಸರ್ಕಾರ ನೀಡಿದ ಹಣದಲ್ಲಿ ಸಣ್ಣಪುಟ್ಟ ವ್ಯಾಪಾರವನ್ನು ಪ್ರಾರಂಭ ಮಾಡಿ ಸ್ವಾವಲಂಬಿಗಳಾಗಿ ಯಾರಿಗೂ ಕೈಚಾಚದಂತೆ ಬದುಕಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣಪ್ಪ ಕಮಕನೂರು, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಲತಾ ರಾಠೋಡ್‌, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಕಲಬುರಗಿ ದಕ್ಷಿಣ ಕಾಂಗ್ರೆಸ್ ಬ್ಲಾಕ್‌ ಸಮಿತಿ ಮಾಜಿ ಅಧ್ಯಕ್ಷ ನೀಲಕಂಠರಾವ ಮೂಲಗೆ, ಸಂದೀಪ ಮಾಳಗಿ, ಶೀಲಾ ಕಾಶಿ, ಶರಣಮ್ಮ ಗುಂಡುಗುರ್ತಿ, ರಬೀಯಾ ಬೇಗಂ, ಬಸ್ಸಮ್ಮ ಭೀಮಪುರ್, ಮಂಜುಳಾ ಹಂಗರಗಿ, ಸವಿತಾ ಸಜ್ಜನ್, ಶ್ವೇತಾ ಗಾಜರೆ, ವೈಶಾಲಿ ಚೌದ್ರಿ ಇತರರು ಹಾಜರಿದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಲತಾ ರಾಠೋಡ್‌ ಅವರು ನೂತನ ಅಧ್ಯಕ್ಷೆ ರೇಣುಕಾ ಸಿಂಗೆ ಅವರಿಗೆ ಸಚಿವರು, ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷದ ಧ್ವಜವನ್ನು ನೀಡಿ ಅಧಿಕಾರ ಹಸ್ತಾಂತರ ಮಾಡಿದರು.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ಗ್ಯಾರಂಟಿಗೆ ವಿಪಕ್ಷಗಳಿಂದ ಬಿಟ್ಟಿಭಾಗ್ಯ ಎಂದು ಟೀಕೆ ಗ್ಯಾರಂಟಿಯಿಂದ ಸ್ವಾಭಿಮಾನ ಬದುಕು ಸಾಧ್ಯ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಹಾಗೂ ಭಕ್ತಿ ಸಿಗುತ್ತಿದೆ

ಮಹಿಳೆಯರ ಆರೋಗ್ಯ ದೃಷ್ಟಿಯಿಂದ ರಾಜ್ಯದ ಎಲ್ಲ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ ಮಾಡಿಸಲು ಸಚಿವರ ಹಾಗೂ ಶಾಸಕರೊಂದಿಗೆ ಚರ್ಚಿಸಲಾಗುತ್ತಿದೆ
ಸೌಮ್ಯಾರೆಡ್ಡಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.