ADVERTISEMENT

ಮಹಿಳೆಯರ ಸಾಹಿತ್ಯ ಅವಗಣನೆ: ಜಯದೇವಿ ಗಾಯಕವಾಡ ಕಳವಳ

ಶಾಂತಾ ಪಸ್ತಾಪೂರ ಸಾಹಿತ್ಯದ ಚಿಂತನ– ಮಂಥನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 4:41 IST
Last Updated 8 ಏಪ್ರಿಲ್ 2024, 4:41 IST
ಕಲಬುರಗಿಯಲ್ಲಿ ಭಾನುವಾರ ನಡೆದ ಶಾಂತಾ ಪಸ್ತಾಪೂರ ಅವರ ಸಾಹಿತ್ಯದ ಚಿಂತನ–ಮಂಥನ ಕಾರ್ಯಕ್ರಮವನ್ನು ಜಯದೇವಿ ಗಾಯಕವಾಡ ಉದ್ಘಾಟಿಸಿದರು. ಲೇಖಕ ಚಿದಾನಂದ ಕುಡ್ಡನ್, ಸಾಹಿತಿ ಎ.ಕೆ.ರಾಮೇಶ್ವರ, ಶೈಲಜಾ ಬಾಗೇವಾಡಿ, ಸುನೀಲ್ ಜಾಬಾದಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಭಾನುವಾರ ನಡೆದ ಶಾಂತಾ ಪಸ್ತಾಪೂರ ಅವರ ಸಾಹಿತ್ಯದ ಚಿಂತನ–ಮಂಥನ ಕಾರ್ಯಕ್ರಮವನ್ನು ಜಯದೇವಿ ಗಾಯಕವಾಡ ಉದ್ಘಾಟಿಸಿದರು. ಲೇಖಕ ಚಿದಾನಂದ ಕುಡ್ಡನ್, ಸಾಹಿತಿ ಎ.ಕೆ.ರಾಮೇಶ್ವರ, ಶೈಲಜಾ ಬಾಗೇವಾಡಿ, ಸುನೀಲ್ ಜಾಬಾದಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸಾಹಿತ್ಯ ಲೋಕದಲ್ಲಿ ಪುರುಷರ ಸಾಹಿತ್ಯ ಹೆಚ್ಚು– ಹೆಚ್ಚು ವಿಮರ್ಶೆ, ಚರ್ಚೆಗೆ ಒಳಪಟ್ಟು ವ್ಯಾಪಕ ಪರಿಗಣನೆಯೂ ಸಿಗುತ್ತಿದೆ. ಆದರೆ, ಮಹಿಳೆಯರು ಬರೆದ ಸಾಹಿತ್ಯವು ವಿಮರ್ಶೆ, ಚರ್ಚೆಗೆ ಒಳಪಡುತ್ತಿಲ್ಲ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಜಯದೇವಿ ಗಾಯಕವಾಡ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕಲಾ ಮಂಡಳದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಸಾಹಿತಿ ಶಾಂತಾ ಪಸ್ತಾಪೂರ ಅವರ ಸಾಹಿತ್ಯದ ಚಿಂತನ– ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇವತ್ತು ದೇವನೂರು ಮಹಾದೇವ, ದೊಡ್ಡರಂಗೇಗೌಡರು ಬರೆದದ್ದು ಚರ್ಚೆ, ವಿಮರ್ಶೆಗೆ ಒಳಪಡುತ್ತಿದೆ. ಆದರೆ, ಮಹಿಳೆಯರು ಬರೆದದ್ದು ಏಕೆ ಚರ್ಚೆ, ವಿಮರ್ಶೆಗೆ ಒಳಪಡುತ್ತಿಲ್ಲ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಭಾಗದ ಗೀತಾ ನಾಗಭೂಷಣ ಅವರಂತಹ ಹಲವು ಮಹಿಳಾ ಸಾಹಿತಿಗಳ ಬರಹಗಳು ರಾಜ್ಯದಾದ್ಯಂತ ಚರ್ಚೆಯಾಗಬೇಕು’ ಎಂದರು.

ADVERTISEMENT

‘ಮಹಿಳೆಯರಲ್ಲಿನ ಅನುಭವಗಳು ಹೆಚ್ಚು ನೈಜ ಹಾಗೂ ಸತ್ಯಕ್ಕೆ ಹತ್ತಿರ ಆದಂತಹವು. ಮಹಿಳೆ, ತನ್ನ ಬದುಕಿನಲ್ಲಿ ಕಂಡ ಕಷ್ಟ ಹಾಗೂ ಎದುರಿಸಿದ ಸಮಸ್ಯೆಗಳೆಲ್ಲವನ್ನು ಒಂದು ಧ್ವನಿಯಾಗಿಸಿಕೊಂಡು ಸುಖ ಮತ್ತು ದುಃಖವನ್ನು ಹಂಚಿಕೊಳ್ಳಲು ಸಾಹಿತ್ಯವನ್ನು ಸಾಧನವನ್ನಾಗಿ ಮಾಡಿಕೊಳ್ಳುತ್ತಾಳೆ. ಆಕೆಯ ಸಾಹಿತ್ಯದಲ್ಲಿ ಕಲ್ಪನೆಗೆ ಅವಕಾಶ ಇಲ್ಲ. ಬದುಕಿನ ದಟ್ಟವಾದ ಅನುಭವ ಮಹಿಳಾ ಸಾಹಿತ್ಯದಲ್ಲಿ ಸಿಗುತ್ತದೆ. ಹೀಗಾಗಿ, ಮಹಿಳಾ ಸಾಹಿತ್ಯ ಎಂದರೆ ಮೂಗು ಮುರಿಯುವವರು ಇದನ್ನು ಅರ್ಥೈಸಿಕೊಳ್ಳಬೇಕು’ ಎಂದು ವಿಶ್ಲೇಷಿಸಿದರು.

‘ಮಹಿಳೆಯರು ಸಹ ಯಾಕೆ ನಮ್ಮ ಬರಹಗಳು ವಿಮರ್ಶೆ ಆಗುತ್ತಿಲ್ಲ ಎಂಬುದನ್ನು ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾವ ತರಹದ ಸಾಹಿತ್ಯ ಕೈಗೆತ್ತಿಕೊಳ್ಳಬೇಕು ಎಂಬುದರ ಚಿಂತನೆಯೂ ಮಾಡಬೇಕು. ಅಡುಗೆ ಮನೆಯ ಸಾಹಿತ್ಯವನ್ನು ಬಿಟ್ಟು ಹೊರ ಬರಬೇಕು. ಮೌಢ್ಯಗಳನ್ನು ತ್ಯಜಿಸಿ ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಅವರು ಜನರ ದೃಷ್ಟಿ ಇರಿಸಿಕೊಂಡು ಸಮಾಜವನ್ನು ವಿಮರ್ಶೆ ಮಾಡುವ ಆಲೋಚನೆಗಳನ್ನು ವಚನಗಳಲ್ಲಿ ಹರಿಬಿಟ್ಟಿದ್ದರಿಂದ ಇಂದಿಗೂ ಅವರು ಪ್ರಸ್ತುತವಾಗಿದ್ದಾರೆ. ಹೀಗಾಗಿ, ಮಹಿಳೆಯರು ಅಂತಹುದೇ ಮಾರ್ಗವನ್ನು ಆಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಲೇಖಕ ಚಿದಾನಂದ ಕುಡ್ಡನ್ ಮಾತನಾಡಿ, ‘ಕನ್ನಡ ಸಾಹಿತ್ಯ ವಿಶಾಲವಾಗಿ ಬೆಳೆದು ಬಂದಿದೆ. ಕಾವ್ಯ ಮತ್ತು ಕಾದಂಬರಿಯ ನಂತರದಲ್ಲಿ ಕಥಾ ಸಾಹಿತ್ಯ ಬಹಳ ಉಜ್ವಲವಾಗಿ ಬೆಳೆಯಿತು. ಪಂಜೆ ಮಂಗೇಶರಾಯರಿಂದ ಶುರುವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾಲದಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ ಅವರಿಂದಲೂ ಕಥಾ ಸಾಹಿತ್ಯ ಎತ್ತರಕ್ಕೆ ಏರಿದೆ’ ಎಂದರು.

ಸುಪ್ರಿಯಾ ಕಡ್ಲೂರ, ಚಂದ್ರಕಲಾ ಶಿಕ್ಷಕಿ, ಝೀನತ್ ಫಾತಿಮಾ ಹಾಗೂ ಶರಣಮ್ಮ ಜಿ.ಸಕ್ಕರಗಿ ಅವರಿಗೆ ಸುವರ್ಣ ಸಿರಿ ಪ್ರಶಸ್ತಿ ನೀಡಲಾಯಿತು. ಸಾಹಿತ್ಯ ಅಕಾಡೆಮಿ ಸದಸ್ಯರಾದ ಚಂದ್ರಕಲಾ ಬಿದರಿ, ಸಿದ್ದರಾಮ ಹೊನ್ಕಲ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಬಿ.ಎಚ್‌. ನಿರಗುಡಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶಾಂತಾ ಪಸ್ತಾಪೂರ, ಎ.ಕೆ. ರಾಮೇಶ್ವರ, ಪ್ರಾಧ್ಯಾಪಕಿ ಸಾರಿಕಾದೇವಿ ಕಾಳಗಿ, ಲೇಖಕಿ ಶೈಜಲಾ ಬಾಗೇವಾಡಿ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಜಾಬಾದಿ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮಾಳಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.