
ಕಲಬುರಗಿ: ‘ಹೆಣ್ಣಿನ ಬಗ್ಗೆ ಕುಹಕ ಆಡುವವರ ನಡುವೆಯೇ ಎದ್ದು ನಿಲ್ಲುವ ಛಲ ಬೆಳೆಸಿಕೊಳ್ಳಬೇಕು’ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಶೃದಿಯಾ ರಾಮೇಗೌಡ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ರೇಷ್ಮಿ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ಕು.ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರೀಡಾಪಟುಗಳಿಗಾಗಿಯೇ ಕ್ರೀಡಾ ಕೋಟಾದಡಿ ಉನ್ನತ ಶಿಕ್ಷಣ ಪಡೆಯಲು ಬಹಳಷ್ಟು ಅನುಕೂಲಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ, ‘ಕು. ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲವು ಗುಲಬರ್ಗಾ ವಿವಿಯಲ್ಲಿ ಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ’ ಎಂದರು.
‘ಮಹಿಳಾ ವಿವಿ ವ್ಯಾಪ್ತಿಯ 158 ಕಾಲೇಜುಗಳ ಪೈಕಿ 47 ಕಾಲೇಜುಗಳಿಂದ 500ಕ್ಕೂ ಅಧಿಕ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇದು ನಾರಿ ಶಕ್ತಿ. ಈ ಶಕ್ತಿ ಇಷ್ಟಕ್ಕೆ ನಿಲ್ಲದೆ ನೀವು ರಾಜ್ಯ, ರಾಷ್ಟ್ರಮಟ್ಟದವರೆಗೆ ಹೋಗಬೇಕು’ ಎಂದು ಹುರಿದುಂಬಿಸಿದರು.
ಗುಲಬರ್ಗಾ ವಿವಿಯ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ‘ನಮ್ಮ ವಿವಿಯ ಆವರಣದಲ್ಲಿ ಮಹಿಳಾ ಕ್ರೀಡಾಕೂಟ ಆಯೋಜಿಸಿದ್ದು ಸಂತಸ ತಂದಿದೆ. ಮಹಿಳಾ ಕ್ರೀಡಾಪಟುಗಳು ಸೋಲು–ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು’ ಎಂದು ಸಲಹೆ ನೀಡಿದರು.
ರೇಷ್ಮಿ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಭಾರತಿ ಎನ್. ರೇಷ್ಮಿ ಮಾತನಾಡಿ, ‘ಅಕ್ಕಮಹಾದೇವಿ ಮಹಾವಿದ್ಯಾಲಯವು ಕ್ರೀಡಾಕೂಟ ನಡೆಸಲು ನಮ್ಮ ರೇಷ್ಮಿ ಮಹಾವಿದ್ಯಾಲಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ಸೋಲು–ಗೆಲುವು ಮುಖ್ಯ ಎನ್ನದೆ ಭಾಗವಹಿಸುವಿಕೆ ಮುಖ್ಯ ಎಂದು ಭಾವಿಸಬೇಕು’ ಎಂದರು.
ಕು. ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ಆರ್.ಎಂ ಸ್ವಾಗತಿಸಿದರು. ಗುಲಬರ್ಗಾ ವಿವಿಯ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ರೇಷ್ಮಿ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಶರದ ಎನ್. ರೇಷ್ಮಿ, ಮುಖ್ಯ ಟ್ರಸ್ಟಿ ಶಿಶಿರ ಎನ್. ರೇಷ್ಮಿ, ಕ.ರಾ.ಅ.ಮ.ವಿಯ ಸಿಂಡಿಕೇಟ್ ಸದಸ್ಯ ಶ್ರೀಪಾದ ಚೌಡಾಪೂರಕರ್, ಗುಲಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ, ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಶಿವಯೋಗಿ ಎಲಿ, ಕ್ರೀಡಾಕೂಟದ ಸಂಯೋಜಕ ಸಂಗಣ್ಣ ಸೇರಿದಂತೆ ಅನೇಕ ಗಣ್ಯರು, ಮಹಿಳಾ ಕ್ರೀಡಾಪಟುಗಳು ಹಾಜರಿದ್ದರು.
ಈ ಕ್ರೀಡಾಕೂಟವು ಮಹಿಳಾ ಸಬಲೀಕರಣದ ಉದ್ದೇಶ ಹೊಂದಿದ್ದು ಇದರಿಂದ ಮಹಿಳೆಯರಲ್ಲಿ ಶಿಸ್ತು ಕ್ರೀಡಾಮನೋಭಾವ ಹುಟ್ಟಿಕೊಳ್ಳುತ್ತದೆಗೀತಾ ಆರ್. ಎಂ. ಕು. ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಕಾಲೇಜಿನ ಪ್ರಾಂಶುಪಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.