ಕಲಬುರಗಿ: ‘ಐದಾರು ಅಡಿ ಅಗಲವಾಗಿ ಹರಡುವ ಬೆಳಕನ್ನು ಒಂದೇ ಕಡೆ ಕೇಂದ್ರೀಕರಿಸಿದರೆ ಅದು ಲೇಸರ್ ಬೀಮ್ ಆಗಿ ಬದಲಾಗಿ 20 ಅಡಿ ದೂರಕ್ಕೂ ಹೋಗುತ್ತದೆ. ಬೆಳಕಿನಂತೆ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪಠ್ಯದಲ್ಲಿಯೇ ಕೇಂದ್ರೀಕರಿಸಿ ಓದಬೇಕು’ ಎಂದು ಚಿಂತಕ ಶಂಕರ ದೇವನೂರ ಹೇಳಿದರು.
ಇಲ್ಲಿನ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಷನ್ ಆಯೋಜಿಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಚೆಲ್ಲಾಟವಾಡದೆ ಮನಸ್ಸನ್ನು ಪಠ್ಯದಲ್ಲಿಯೇ ಕೇಂದ್ರೀಕರಿಸಿ ಓದಿದರೆ ಎಸ್‌ಎಸ್‌ಎಲ್‌ಸಿ ಆನಂದದಾಯಕವಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಭಯಪಡದೆ ಸಂಭ್ರಮಿಸಿ. ಮನಸ್ಸನ್ನು ಚಂಚಲ ಮಾಡಿಕೊಂಡು ಜೀವನ ಹಾಳು ಮಾಡಿಕೊಂಡರೆ ಇನ್ನೊಬ್ಬರಡಿ ಆಳಾಗುತ್ತೀರಿ. ಈಗಿನಿಂದಲೇ ಎಚ್ಚೆತ್ತುಕೊಳ್ಳಿ’ ಎಂದು ಸಲಹೆ ನೀಡಿದರು.
‘ಸಾಧ್ಯವಾಗುವ ಮನಸ್ಸಿಗೆ ಅಸಾಧ್ಯವಾಗುವುದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅಪ್ರಬುದ್ಧವಾದ ಮತ್ತು ಬೇಡವಾದ ಚಿಂತನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ. ಓದು ಮತ್ತು ಬರಹದಲ್ಲಿ ತೊಡಗಿಸಿಕೊಂಡಾಗ ನಿಮ್ಮಿಂದ ಹೊರ ಬರುವ ಒಳ್ಳೆಯ ಫಲಿತಾಂಶದ ಫಲದಿಂದ ನಿಮ್ಮ ಶಾಲೆ, ಪೋಷಕರಿಗೆ ಹೆಸರು ಬರುತ್ತದೆ. ಆಗ ಜಗತ್ತೇ ನಿಮ್ಮನ್ನು ಆರಾಧಿಸುತ್ತದೆ’ ಎಂದರು.
‘ನೋಡಬಾರದ್ದನ್ನು ನೋಡಿದರೆ, ಕೇಳಬಾರದ್ದನ್ನು ಕೇಳಿದರೆ ಬದುಕು ಕತ್ತಲೆ ಆಗುತ್ತದೆ. ಮನಸ್ಸು ಅರಳಿಸುವ ವಿಚಾರಗಳನ್ನು ಕೇಳಬೇಕು, ನೋಡಬೇಕು. ನಿಮಗಾಗಿ ದುಡಿಯುವ ತಾಯಿ–ತಂದೆ ಕಷ್ಟಗಳನ್ನು ಅರ್ಥೈಸಿಕೊಳ್ಳಬೇಕು. ಅವರು ಕಟ್ಟಿಕೊಂಡ ಕನಸುಗಳನ್ನು ಸಾಕಾರ ಮಾಡಲು ನಿತ್ಯ ಅಧ್ಯಯನ ಮಾಡಿ’ ಎಂದು ಹೇಳಿದರು.
‘ಮಕ್ಕಳಿಗೆ ಮಾನವೀಯತೆ ಹಾಗೂ ಹೃದಯಶೀಲತೆ ಕಲಿಸಿಕೊಡುವುದೇ ನಿಜವಾದ ಶಿಕ್ಷಣ. ಶಿಕ್ಷಕನು ವಿದ್ಯಾರ್ಥಿಗಳಲ್ಲಿನ ಮೌಢ್ಯ, ಅಜ್ಞಾನ ಮತ್ತು ಅಂಧಕಾರದ ಮೇಲೆ ದಾಳಿ ಮಾಡಿ, ಕಲಿಕೆಯಲ್ಲಿ ಆನಂದವನ್ನು ಪ್ರಕಟಿಸುತ್ತಾನೆ. ಆ ಮೂಲಕ ಜ್ಯೋತಿಗಳನ್ನು ಬೆಳಗಿಸುತ್ತಾನೆ’ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ ಮಾತನಾಡಿ, ‘ಸಾಧಕರನ್ನು ಮನಸ್ಸಿಲ್ಲಿ ಇರಿಸಿಕೊಂಡು ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ದೃಷ್ಟಿಯನ್ನು ಇರಿಸಿಕೊಂಡು ಓದಬೇಕು’ ಎಂದರು.
‘ಶಾಲಾ ಅವಧಿ ಹೊರತುಪಡಿಸಿ ಬೆಳಿಗ್ಗೆ ಮತ್ತು ಸಂಜೆ ಪ್ರತಿ ವಿಷಯಗಳ ಓದಿಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಶಾಲೆಯ ಕಲಿಕೆಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು. ಶಿಕ್ಷಕರೂ ಮಕ್ಕಳು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಕ್ರಿಯಾತ್ಮಕವಾಗಿ ಕಲಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಫೌಂಡೇಷನ್ ಅಧ್ಯಕ್ಷ ಎಸ್.ಎಂ. ರೆಡ್ಡಿ, ಕಾರ್ಯದರ್ಶಿ ಪ್ರೊ. ಚನ್ನಾರೆಡ್ಡಿ ಪಾಟೀಲ, ಡಿಡಿಪಿಐ ಸೂರ್ಯಕಾಂತ ಮದಾನೆ, ಬಿಇಒಗಳಾದ ವಿಜಯಕುಮಾರ ಜಮಖಂಡಿ, ಸೋಮಶೇಖರ ಹಂಚನಾಳ, ಪ್ರಮುಖರಾದ ಗುರುರಾಜ ಕುಲಕರ್ಣಿ, ಕರುಣೇಶ ಹಿರೇಮಠ, ಡಾ. ರಾಜಕುಮಾರ ಪಾಟೀಲ, ಪ್ರಶಾಂತ ಕುಲಕರ್ಣಿ, ಸುಧಾಕರ, ಅಶೋಕ ಕಾಬಾ, ವಿಜಯ ನಾಲವಾರ ಉಪಸ್ಥಿತರಿದ್ದರು.
ಶಿಕ್ಷಕನು ತಾನೇ ಉರಿಯದ ಇನ್ನೊಂದು ದೀಪವನ್ನು ಬೆಳಗಿಸಲು ಸಾಧ್ಯವಿಲ್ಲ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ವೃತ್ತಿ ಪ್ರೇಮ ಇಲ್ಲದೆ ಇದ್ದರೆ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಬಾರದುಶಂಕರ ದೇವನೂರ, ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.