ADVERTISEMENT

ರಕ್ತದಾನದಿಂದ ದೇಹ, ಮನಸ್ಸು ಸದೃಢ; ಡಾ.ಸಿದ್ದಗಂಗಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:33 IST
Last Updated 2 ಅಕ್ಟೋಬರ್ 2022, 5:33 IST
ಕಲಬುರಗಿ ನಗರದ ಜಿಮ್ಸ್ ಬಳಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಮಾಲಿ ಶನಿವಾರ ಚಾಲನೆ ನೀಡಿದರು
ಕಲಬುರಗಿ ನಗರದ ಜಿಮ್ಸ್ ಬಳಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಮಾಲಿ ಶನಿವಾರ ಚಾಲನೆ ನೀಡಿದರು   

ಕಲಬರುಗಿ: ‘ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯವಾಗಿದ್ದು, ದೇಹ ಹಾಗೂ ಮನಸ್ಸು ಸದೃಢವಾಗಿ ಇರುತ್ತದೆ’ ಎಂದು ಅತಿಥಿ ಉಪನ್ಯಾಸಕಿ ಡಾ. ಸಿದ್ದಗಂಗಾ ಮಂಗಶೆಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರಗಳು, ರೆಡ್‌ರಿಬ್ಬನ್ ಕ್ಲಬ್‌, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಲಬುರಗಿ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ರಕ್ತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಬ್ಬರ ರಕ್ತವನ್ನು ಇನ್ನೊಬ್ಬರ ಜೀವ ರಕ್ಷಣೆಗೆ ಬಳಸುವುದು ಜಗತ್ತಿನ ಅತಿದೊಡ್ಡ ಸಂಶೋಧನೆ. ರಕ್ತದಾನದಿಂದ ಗಾಯಗೊಂಡ ಹಲವರ ಜೀವ ಉಳಿಸಬಹುದು. ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಒಮ್ಮೆ ಶೇಖರಿಸಿದ ರಕ್ತವನ್ನು 35 ದಿನಗಳ ಒಳಗೆ ರೋಗಿಗಳಿಗೆ ನೀಡಬೇಕು. ಹೀಗಾಗಿ, 18ರಿಂದ 60 ವರ್ಷದವರೆಗಿನ ಆರೋಗ್ಯವಂತರು ತಮ್ಮ ರಕ್ತವನ್ನು ದಾನ ಮಾಡಬಹುದು’ ಎಂದರು.

‘ರಕ್ತದಾನವು ಒಗ್ಟಟ್ಟಿನ ಕ್ರಿಯೆಯಾಗಿದೆ. ಈ ಪ್ರಯತ್ನದಲ್ಲಿ ಎಲ್ಲರೂ ಒಗ್ಗೂಡಿ, ಜೀವ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಸುಶಾಂತ ಎಂ. ಚೌಗಲೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಂದ್ರಕಾಂತ ನರಿಬೊಳಿ ಮಾತನಾಡಿ, ‘ಜಿಲ್ಲೆಯಲ್ಲಿ 44 ಶಿಬಿರಗಳನ್ನು ಮಾಡಲಾಗಿದೆ. 11 ತಂಡಗಳನ್ನು ರಚಿಸಿ, 1085 ರಕ್ತದ ಪ್ಯಾಕೇಟ್ ಸಂಗ್ರಹ ಮಾಡಿದ್ದೇವೆ’ ಎಂದು ತಿಳಿಸಿದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಗುರುಶಾಂತ, ನಾಗೇಶ ಕಲ್ಲಪ್ಪ, ನಾಗನಾಥ ಕಾವಳೆ ಅವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಜಿಮ್ಸ್ ಆಸ್ಪತ್ರೆಯಿಂದ ಹಳೆ ಜಿಲ್ಲಾ ಪಂಚಾಯಿತಿ ಸಭಾಂಗಣದವರೆಗೆ ನಡೆದ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಮಾಲಿ ಅವರು ಚಾಲನೆ ನೀಡಿದರು.

ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಜ್ಞ ಡಾ.ಎ.ಎಸ್‌.ರುದ್ರವಾಡಿ, ಎಆರ್‌ಟಿಐ ವೈದ್ಯಾಧಿಕಾರಿ ರೇಮಾ ಹಳವಾರ, ಸರ್ವೇಕ್ಷಣಾಧಿಕಾರಿ ಡಾ. ಸುರೇಶ ಮೇಕಿನ ಇದ್ದರು.

* ರಕ್ತಕ್ಕೆ ನಿರಂತರವಾದ ಬೇಡಿಕೆ ಇದೆ. ಅಪಘಾತ, ತುರ್ತು ಚಿಕಿತ್ಸೆಯಲ್ಲಿ ಜೀವ ಉಳಿಸಲು ರಕ್ತ ಅತ್ಯಮೂಲವಾದದ್ದು
ಡಾ.ಎ.ಎಸ್‌.ರುದ್ರವಾಡಿ ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.