ADVERTISEMENT

ಕಲಬುರಗಿ | ದೇಶದ ಅಭಿವೃದ್ಧಿಗೆ ಅಂಗವಿಕಲರ ಕೊಡುಗೆ ಹಿರಿದು: ರೇವೂರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 6:03 IST
Last Updated 4 ಡಿಸೆಂಬರ್ 2022, 6:03 IST
ಕಲಬುರಗಿಯಲ್ಲಿ ನಡೆದ ವಿಶ್ವ ಅಂಗವಿಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಅಂಗವಿಕಲರನ್ನು ಸನ್ಮಾನಿಸಲಾಯಿತು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ.ಪಾಟೀಲ, ಜಿ. ಗಾಯತ್ರಿ, ವೆಂಕಟೇಶ ದೇಶಪಾಂಡೆ ಇದ್ದರು
ಕಲಬುರಗಿಯಲ್ಲಿ ನಡೆದ ವಿಶ್ವ ಅಂಗವಿಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಅಂಗವಿಕಲರನ್ನು ಸನ್ಮಾನಿಸಲಾಯಿತು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ.ಪಾಟೀಲ, ಜಿ. ಗಾಯತ್ರಿ, ವೆಂಕಟೇಶ ದೇಶಪಾಂಡೆ ಇದ್ದರು   

ಕಲಬುರಗಿ: ‘ದೇಶದ ಅಭಿವೃದ್ಧಿಯಲ್ಲಿ ಅಂಗವಿಕಲರು ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಇಲ್ಲಿನ ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇತರೆ ಎನ್‌ಜಿಒಗಳ ವತಿಯಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ರಾಜ್ಯದ ಅಂಗವಿಕಲರು ಹೆಚ್ಚಿನ ಚಿನ್ನದ ಪದಕ ಗೆದ್ದು, ನಾಡಿಗೆ ಕೀರ್ತಿ ತಂದಿದ್ದಾರೆ. ಅಂಗವಿಕಲ ಶ್ರೇಯೋಭಿವೃದ್ಧಿಗೆ ಮುಖ್ಯಮಂತ್ರಿ ಅವರು ಹೆಚ್ಚಿನ ಅನುದಾನ ನೀಡಬೇಕು. ಸರ್ಕಾರದ ಯೋಜನೆಗಳನ್ನು ಅಂಗವಿಕಲರು ಸದುಪಯೋಗ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ಸಾಮಾನ್ಯರಿಗೆ ಇಲ್ಲದ ವಿಶೇಷ ಶಕ್ತಿಯನ್ನು ದೇವರು ಅಂಗವಿಕಲರಿಗೆ ನೀಡಿರುತ್ತಾನೆ. ಸರ್ಕಾರ ಕೂಡ ಅಂಗವಿಕಲರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಹೆಚ್ಚಿನ ಅನುದಾನ ಮೀಸಲಿಡಬೇಕು’ ಎಂದರು.

‘ಸರ್ಕಾರದಿಂದ ಅಂಗವಿಕಲರಿಗಾಗಿ ತರಲಾದ ದ್ವಿಚಕ್ರ ವಾಹನ, ವ್ಹೀಲ್ ಚೇರ್‌ನಂತಹ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೆಂಕಟೇಶ ದೇಶಾಪಾಂಡೆ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸಿದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿವಿಧ ಕ್ರೀಡಾಕೂಟಗಳಲ್ಲಿ ಗೆದ್ದ ಸಾಧಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಿವಶರಣಪ್ಪ, ಮೂಕ ಮತ್ತು ಕಿವುಡರ ಸಂಘದ ಅಧ್ಯಕ್ಷ ಧನಂಜಯ ಇದ್ದರು. ಅಂಗವಿಕಲರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.