ADVERTISEMENT

ಜಾತಿಗಣತಿಯಲ್ಲಿ ಲಿಂಗಾಯತ ಬರೆಯಿಸಿ: ಶಿವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:07 IST
Last Updated 26 ಜುಲೈ 2025, 7:07 IST
ಶಿವಾನಂದ ಸ್ವಾಮೀಜಿ
ಶಿವಾನಂದ ಸ್ವಾಮೀಜಿ   

ಕಮಲಾಪುರ: ‘ಸಮಾಜದ ಒಗ್ಗಟ್ಟು, ಸಮಾನತೆಗಾಗಿ ಹಾವೇರಿಯಲ್ಲಿ ನಡೆಸಿದ ಪಂಚ ಪೀಠಾಧೀಶ್ವರರ ಶೃಂಗ ಸಭೆಯಲ್ಲಿ ಸಮಾನತೆ ಕಡೆಗಣಿಸಲಾಗಿದೆ. ಪಂಚಾಚಾರ್ಯರು ತಾವು 16 ವರ್ಷ ಒಗ್ಗೂಡಲಿಲ್ಲ. ಇಂಥವರಿಂದ ಸಮಾಜ ಒಗ್ಗಟ್ಟು ಸಾಧಿಸಲು ಸಾಧ್ಯವೆ?’ ಎಂದು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವೇಶ್ವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿ ಅದರು, ‘ಹಾವೇರಿಯಲ್ಲಿ 500 ಪಟ್ಟದ್ದೇವರುಗಳನ್ನು ಸೇರಿಸಿ ಸಮ್ಮೇಳನ ಮಾಡಲಾಯಿತು. ಆದರೆ ಅವರಲ್ಲೇ ಸಮಾನತೆ ಇರಲಿಲ್ಲ. ಪಂಚಾಚಾರ್ಯರು ದೊಡ್ಡ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಾರೆ. ಉಳಿದವರನ್ನು ಕೆಳಗೆ ಕೂರಿಸಿದ್ದಾರೆ. ಹೀಗಾದರೆ ಹೇಗೆ ಸಮಾನತೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘ಲಿಂಗಾಯತ ಧರ್ಮವು, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜನಿಸಿತು. ಹೀಗಾಗಿ ಜಾತಿ ಜನಗಣತಿಯಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಯಿಸಬೇಕು’ ಎಂದು ಹೇಳಿದರು. 

ADVERTISEMENT

‘ಬಸವಣ್ಣನವರ ತತ್ವಗಳನ್ನು ರಾಜ್ಯದಾದ್ಯಂತ ಪಸರಿಸಲು ಲಿಂಗಾಯತ ಮಠಾಧೀಶರ ಒಕ್ಕೂಟ ಮಾಡಿಕೊಂಡಿದ್ದೇವೆ. ಬಸವನ ಬಾಗೇವಾಡಿಯಲ್ಲಿ ಸೆಪ್ಟೆಂಬರ್‌ 1ರಂದು ‘ಬಸವ ಸಂಸ್ಕೃತಿ ಅಭಿಯಾನ’ ಆರಂಭಿಸಲಾಗುವುದು. ಲಿಂಗಾಯತ ಮಠಾಧೀಶರ ಒಕ್ಕೂಟದ 400 ಮಠಾಧೀಶರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಕಾರ್ಯಕ್ರಮ ನಡೆಸಲಾಗುವುದು. ಅಕ್ಟೋಬರ್‌ 5ರಂದು ಬೆಂಗಳೂರಿನಲ್ಲಿ ಸಮಾರೋಪಗೊಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.