ADVERTISEMENT

ಯಡ್ರಾಮಿಯಲ್ಲಿ ಸಿಎಂ ಕಾರ್ಯಕ್ರಮ: ಸಿದ್ಧತೆ ಪರಿಶೀಲಿಸಿದ ಡಾ. ಅಜಯ್ ಸಿಂಗ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:27 IST
Last Updated 11 ಜನವರಿ 2026, 5:27 IST
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಅವರು ಯಡ್ರಾಮಿಯಲ್ಲಿ ಸಮಾರಂಭದ ವೇದಿಕೆ ಪರಿಶೀಲಿಸಿದರು
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಅವರು ಯಡ್ರಾಮಿಯಲ್ಲಿ ಸಮಾರಂಭದ ವೇದಿಕೆ ಪರಿಶೀಲಿಸಿದರು   

ಯಡ್ರಾಮಿ: ಇದೇ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರೂ ಆದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಶನಿವಾರ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.  

ಯಡ್ರಾಮಿಯಲ್ಲಿ ಬಹಿರಂಗ ಸಭೆ ನಡೆಯುವ ಬೃಹತ್‌ ವೇದಿಕೆ, ಗಣ್ಯರು ಬಂದು ಇಳಿಯಲಿರುವ 2 ಹೆಲಿಪ್ಯಾಡ್‌, ಸಾರ್ವಜನಿಕರಿಗಾಗಿ ಮಾಡಲಾಗಿರುವ ಭೋಜನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆಗಳನ್ನು ವೀಕ್ಷಣೆ ಮಾಡಿದರು. 

ನಂತರ ಮಾತನಾಡಿದ ಅಜಯ್ ಸಿಂಗ್, ‘ಸಿಎಂ, ಡಿಸಿಎಂ ಅವರು ಯಡ್ರಾಮಿಗೆ ಬಂದು ಹೋಗುವವರೆಗೂ ಶಿಸ್ತು, ಸಂಯಮ ಕಾಯ್ದುಕೊಂಡು ಬರಬೇಕು. ನಿಮ್ಮ ಮನೆಯ ಸಮಾರಂಭ ರೂಪದಲ್ಲಿ ಸಹಕರಿಸಬೇಕು. ಇಲ್ಲಿಗೆ ಬಂದವರಿಗೆ ಊಟೋಪಚಾರದಲ್ಲಿ ಯಾವುದೇ ತೊಂದರೆ ಕಾಡದಂತೆ ಗಮನ ಹರಿಸಬೇಕು. ಜೇವರ್ಗಿ ಸೇರಿದಂತೆ ವಿವಿಧೆಡೆಯಿಂದ ಸಮಾರಂಭಕ್ಕೆ ಜನಸಾಗರವೇ ಹರಿದು ಬರುವ ಸಂಭವಗಳಿರೋದರಿಂದ ಹೆಚ್ಚಿನ ಸವಲತ್ತು, ನೀರು, ಊಟೋಪಚಾರದ, ಆಸನದ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾರಂಭಕ್ಕಾಗಿ ಬೃಹತ್‌ ವೇದಿಕೆ ಸಿದ್ಧಗೊಳ್ಳುತ್ತಿದ್ದುದನ್ನು ಪರಿಶೀಲಿಸಿದ ಅಜಯ್ ಸಿಂಗ್, ವೇದಿಕೆ ಹೆಚ್ಚಿನ ಅಗಲ, ವಿಸ್ತಾರ ಇರುವಂತೆ ನೋಡಿಕೊಳ್ಳಬೇಕು. ಬೆಳಕು, ಗಾಳಿ ಇರುವಂತೆ ವೇದಿಕೆ ನಿರ್ಮಾಣಕ್ಕೆ ಸೂಚನೆ ನೀಡಿದರು.

ಅಂದಾಜು 15 ಸಾವಿರದಷ್ಟು ಜನ ಬರುವ ನಿರೀಕ್ಷೆ ಇರೋದರಿಂದ ಅದಕ್ಕಾಗಿ ಸಕಲ ಸಿದ್ಧತೆ ಕಟ್ಟುನಿಟ್ಟಾಗಿ ನಡೆಸಬೇತು. ಸಮಾರಂಭದ ಸ್ಥಳದಲ್ಲಿ ವಾಹನ, ಜನ ದಟ್ಟಣೆ ಆಗದಂತೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ವ್ಯವಸ್ಥೆ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಜೇವರ್ಗಿ ತಹಶೀಲ್ದಾರ್‌ ಮಲ್ಲಣ್ಣ ಯಲಗೋಡ ಹಾಗೂ ಎಎಸ್ಪಿ ಮಹೇಶ ಮೇಘಣ್ಣವರ್‌ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.