
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ಮಗನ ಸಾವಿಗೆ ಸೊಸೆ ಮೇಲೆ ಅನುಮಾನಗೊಂಡು ಬುಧವಾರ ಶವ ಪರೀಕ್ಷೆ ಮಾಡಿಸಲಾಯಿತು
ಯಡ್ರಾಮಿ: ಮಗನ ಸಾವಿಗೆ ಸೊಸೆ ಕಾರಣವೆಂದು ತಿಳಿದು ಮಗನ ತಾಯಿ ಲಕ್ಷ್ಮೀಬಾಯಿ ಹದಿನಾಲ್ಕು ತಿಂಗಳ ಬಳಿಕ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ಹೂತಿದ್ದ ಹೆಣವನ್ನು ಹೊರ ತೆಗೆಸಿ ಶವ ಪರೀಕ್ಷೆ ಮಾಡಿಸಿದ ಘಟನೆ ಬುಧವಾರ ಮುಂಜಾನೆ ನಡೆಯಿತು.
36 ವರ್ಷದ ಪಂಡಿತ್ ದೊಡಮನಿ ಹದಿನಾಲ್ಕು ತಿಂಗಳ ಹಿಂದೆ ಮೃತಪಟ್ಟ ದುರ್ದೈವಿ. ಇವರು ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ವಾಸವಾಗಿದ್ದರು. ಮೃತ ಪಂಡಿತ್ ಅವರ ತಾಯಿ ಮಗನ ಸಾವಿನ ವಿಚಾರದಲ್ಲಿ ಸೊಸೆ ರೂಪಾ ಮೇಲೆ ಅನುಮಾನ ಬಂದು ಇದೇ 2025ರ ಜುಲೈ 24ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದರು. ರೂಪಾ ಅವರು ಬಿಜಾಪುರ ಜಿಲ್ಲೆಯ ಬಿಳವಾರ ಗ್ರಾಮದವರಾಗಿದ್ದಾರೆ.
ಪಂಡಿತ್ ಅವರು 2014 ರಲ್ಲಿ ಮದುವೆ ಮಾಡಿಕೊಂಡು ಚಿಕ್ಕಬಳ್ಳಾಪುರದ ಮಂಡಿಕಲ್ಲು ಜೆಸ್ಕಾಂ ಕಚೇರಿಯಲ್ಲಿ 12 ವರ್ಷದಿಂದ ಲೈನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಶವ ಹೊರತೆಗೆಯುವ ವೇಳೆ ಕೆರೆಸಂದ್ರ ಠಾಣೆ ಪಿಎಸ್‌ಐ ಗುಣವತಿ ಎನ್.ಗಣಪತಿ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಯಡ್ರಾಮಿ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.