ADVERTISEMENT

ದೆಹಲಿಗೆ ತೆರಳುವ ಧಾವಂತ; ಯಡಿಯೂರಪ್ಪ ಚುಟುಕು ಭಾಷಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:22 IST
Last Updated 17 ಸೆಪ್ಟೆಂಬರ್ 2020, 5:22 IST
ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಕಲಬುರ್ಗಿ: ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಚುಟುಕಾದ ಭಾಷಣ ಮಾಡಿ ನಿರ್ಗಮಿಸಿದರು.

ಬೆಳಿಗ್ಗೆ 8.15ಕ್ಕೆ ಅವರು ವಿಶೇಷ ವಿಮಾನದ ಮೂಲಕ ಇಲ್ಲಿಗೆ ಬರಬೇಕಿತ್ತು. 45 ನಿಮಿಷ ತಡವಾಗಿ ಬಂದರು. ವಿಮಾನ ನಿಲ್ದಾಣದಿಂದ ನೇರವಾಗಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತಕ್ಕೆ ತೆರಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಡಿಎಆರ್‌ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೋವಿಂದ ಕಾರಜೋಳ ಅವರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಯಿತು. ಅವರ ನಂತರ ಭಾಷಣ ಆರಂಭಿಸಿದ ಯಡಿಯೂರಪ್ಪ ಎರಡೂವರೆ ಪುಟ ಇದ್ದ ಲಿಖಿತ ಭಾಷಣ ಬದಿಗಿಟ್ಟು ಕೆಲವೇ ನಿಮಿಷ ಮಾತನಾಡಿ ಹೊರಟು ನಿಂತರು.

ADVERTISEMENT

ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತ ಕೊನೆಯಲ್ಲಿ ಇಟ್ಟುಕೊಂಡಿತ್ತು. ಲಗುಬಗೆಯಿಂದ ಸನ್ಮಾನ ನೆರವೇರಿಸಿದ ಮುಖ್ಯಮಂತ್ರಿ ವಿಮಾನ ನಿಲ್ದಾಣದತ್ತ ತೆರಳಿದರು.

ಮುಖ್ಯಮಂತ್ರಿಯ ದೆಹಲಿ ಯಾತ್ರೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಾಥ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.