ADVERTISEMENT

ಕಲಬುರಗಿ: ನೊಂದ ಮನಸ್ಸುಗಳಿಗೆ ಸ್ಪಂದನೆಯ ಕೊರತೆ

ಯುವ ಸ್ಪಂದನ ಯೋಜನೆಯಡಿ ಯುವ ಪರಿವರ್ತಕ, ಸಮಾಲೋಚಕರಾಗಲು ನಿರಾಸಕ್ತಿ

ಬಸವರಾಜ ದಳವಾಯಿ
Published 6 ಜೂನ್ 2025, 4:35 IST
Last Updated 6 ಜೂನ್ 2025, 4:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಯುವಜನರ ಮಾನಸಿಕ ಆರೋಗ್ಯ ಬಲವರ್ಧನೆ, ಅವರು ದಾರಿತಪ್ಪದಂತೆ ಸ್ಥೈರ್ಯ ತುಂಬಲು ನೆರವಾಗುತ್ತಿದ್ದ ‘ಯುವ ಸ್ಪಂದನ’ ಯೋಜನೆಗೆ ಜಿಲ್ಲೆಯಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಎಪಿಡಿಮಿಯಾಲಜಿ ವಿಭಾಗದ ತಾಂತ್ರಿಕ ನೆರವು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ 2016ರಲ್ಲಿ ಜಿಲ್ಲೆಗೊಂದು ಯುವ ಸ್ಪಂದನ ಕೇಂದ್ರ ತೆರೆಯಲಾಗಿತ್ತು.

ಮಾನಸಿಕ ಸಮಸ್ಯೆಗೆ ಸಿಲುಕುವ ಯುವಜನರು ಉಚಿತವಾಗಿ ಆಪ್ತ ಸಮಾಲೋಚನೆಗೆ ಒಳಗಾಗಬಹುದು. ನೇರವಾಗಿ ಕೇಂದ್ರಕ್ಕೆ ತೆರಳಿ ಅಥವಾ ಸಹಾಯವಾಣಿ ಸಂಪರ್ಕಿಸಿ ನೆರವು ಪಡೆಯಬಹುದು. ಅವರನ್ನು ಖಿನ್ನತೆ, ಆತ್ಮಹತ್ಯೆಯಂತಹ ಕೃತ್ಯಗಳಿಗೆ ಒಳಗಾಗದಂತೆ ತಡೆಯುವ ಉದ್ದೇಶದೊಂದಿಗೆ ಕಲಬುರಗಿಯ ಜಿಲ್ಲಾ ಕ್ರೀಡಾಂಗಣದ ಸಂಕೀರ್ಣದಲ್ಲಿ ಕೇಂದ್ರವನ್ನು ಆರಂಭಿಸಲಾಗಿದೆ.

ADVERTISEMENT

ಸಮಾಲೋಚನೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರಕ್ಕೊಬ್ಬರು ಯುವ ಸಮಾಲೋಚಕ ಹಾಗೂ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಐದು ಮಂದಿ ಯುವ ಪರಿವರ್ತಕರನ್ನು ನೇಮಿಸಿ ಅವರಿಗೆ ನಿಮ್ಹಾನ್ಸ್‌ನಿಂದ ಗೌರವಧನ ನೀಡಲಾಗುತ್ತದೆ. ಆದರೆ, ಕೆಲಸ ಹೆಚ್ಚು, ಗೌರವಧನ ತೀರಾ ಕಡಿಮೆ ಎನ್ನುವ ಕಾರಣ ನೀಡಿ ಸಮಾಲೋಚಕರು ಹಾಗೂ ಪರಿವರ್ತಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

‘ಕೆಲವು ಯುವ ಪರಿವರ್ತಕರು ಕಾರಣ ಹೇಳದೇ ಕೆಲಸ ಬಿಡುತ್ತಾರೆ. ಅವರಿಗೆ ಏನು ತೊಂದರೆ ಆಗುತ್ತದೆ ಎಂದೂ ಹೇಳುವುದಿಲ್ಲ. ಹೀಗಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಯುವಜನರನ್ನು ತಲುಪುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಹೀಗಾಗಿ ಹೆಚ್ಚು ಕಡೆ ನಾನೇ ಓಡಾಡಿ ಅರಿವು ಮೂಡಿಸಲು ನೆರವಾಗುತ್ತೇನೆ’ ಎಂದು ಯುವ ಸ್ಪಂದನ ಯೋಜನೆಯ ಕ್ಷೇತ್ರ ಸಂಪರ್ಕಾಧಿಕಾರಿ ರಮೇಶ್ ಹೇಳುತ್ತಾರೆ.

‘ಜಿಲ್ಲಾ ಮಟ್ಟದ ಯುವ ಸಮಾಲೋಚಕರಿಗೆ ನಿಮ್ಹಾನ್ಸ್‌ನಿಂದ ಗೌರವಧನ ಹಾಗೂ ಪ್ರಯಾಣ ವೆಚ್ಚ ಸೇರಿ ₹ 9,000 ಹಾಗೂ ಯುವ ಪರಿವರ್ತಕರಿಗೆ ₹ 7,000 ನೀಡಲಾಗುತ್ತದೆ. ಅದು ಏನಕ್ಕೂ ಸಾಲುವುದಿಲ್ಲ. ಅರೆಕಾಲಿಕ ಕೆಲಸ ಎಂದು ಹೆಚ್ಚು ದುಡಿಸಿಕೊಳ್ಳಲಾಗುತ್ತದೆ’ ಎಂದು ಈ ಹಿಂದೆ ಕೆಲಸ ಮಾಡಿದ ಯುವ ಪರಿವರ್ತಕರೊಬ್ಬರು ಹೇಳಿದರು.

‘ಯೋಜನೆಯ ಕೆಲವು ಮಾನದಂಡಗಳೂ ಸಮರ್ಪಕವಾಗಿಲ್ಲ. ಶಾಲೆ, ಕಾಲೇಜುಗಳು ಸೇರಿ ತಿಂಗಳಿಗೆ ಆರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. 20 ಮಂದಿಗೆ ಆಪ್ತಸಮಾಲೋಚನೆ ಮಾಡಬೇಕಿತ್ತು. ತಿಂಗಳಿಗೆ 1,500 ಜನರಿಗೆ ಯೋಜನೆ ತಲುಪಿಸಬೇಕು. ಎಲ್ಲರಿಂದಲೂ ಫೀಡ್‌ಬ್ಯಾಕ್ ಪಡೆಯಬೇಕು. ಇದು ಕಷ್ಟದ ಕೆಲಸ’ ಎನ್ನುತ್ತಾರೆ ಅವರು.

ಬೇರೆ ಉದ್ಯೋಗ ಹಾಗೂ ಮದುವೆ ಕಾರಣ ನೀಡಿ ಯುವ ಪರಿವರ್ತಕರು ಸಮಾಲೋಚಕರು ಬಿಟ್ಟು ಹೋಗಿದ್ದಾರೆ. ಹೊಸಬರಿಗೆ ತರಬೇತಿ ನೀಡಲಾಗಿದ್ದು ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತೇವೆ
ರಮೇಶ್ ಕ್ಷೇತ್ರ ಸಂಪರ್ಕಾಧಿಕಾರಿ ಯುವ ಸ್ಪಂದನ ಯೋಜನೆ
ಯುವ ಸ್ಪಂದನ ಕೇಂದ್ರಕ್ಕೆ ಜಾಗ ಅಗತ್ಯ ಪರಿಕರಗಳನ್ನು ನೀಡುವುದು ನಮ್ಮ ಕರ್ತವ್ಯ. ಉಳಿದ ಕೆಲಸವನ್ನು ನಿಮ್ಹಾನ್ಸ್‌ ನೇಮಿಸಿದ ಎನ್‌ಜಿಒಗಳೇ ನೋಡಿಕೊಳ್ಳುತ್ತವೆ
ಅಮೃತ ಅಷ್ಟಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ

ಯಾರಿಗೆ ಸಮಾಲೋಚನೆ?

‘ಎಂಟನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಕೆಲವು ಮಾನದಂಡಗಳ ಮೇಲೆ ಯುವ ಪರಿವರ್ತಕರು ಮತ್ತು ಸಮಾಲೋಚಕರನ್ನು ಆಯ್ಕೆ ಮಾಡಲಾಗುತ್ತದೆ. ಅವರು 21–35ರಿಂದ ವಯೋಮಾನದವರಿರಬೇಕು. ಯಾವುದಾದರೂ ಪದವಿ ಪಾಸಾಗಿರಬೇಕು’ ಎಂದು ಯುವ ಸ್ಪಂದನ ಯೋಜನೆಯ ಐದು ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಕ್ಷೇತ್ರ ಸಂಪರ್ಕಾಧಿಕಾರಿ ರಮೇಶ್ ಹೇಳಿದರು. ‘2023ರ ಮೇ 30ರಿಂದ 2025ರ ಮೇ 30ರವರೆಗೆ (ಎರಡು ವರ್ಷಗಳಲ್ಲಿ) 128 ಮಂದಿ ಜಿಲ್ಲಾ ಕೇಂದ್ರದಲ್ಲಿ ಸಮಾಲೋಚನೆಗೆ ಒಳಗಾಗಿದ್ದಾರೆ. ಓದಿದ್ದು ಮರೆತುಹೋಗುವುದು ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಖಿನ್ನತೆಗೆ ಒಳಗಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಲೋಚನೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು. ‘ಎರಡು ವರ್ಷಗಳಲ್ಲಿ 38 ಜಾಗೃತಿ ಕಾರ್ಯಕ್ರಮಗಳಾಗಿವೆ. ನಮ್ಮಿಂದ ಸಮಾಲೋಚನೆಗೆ ಒಳಗಾದವರನ್ನು ಅಗತ್ಯ ಬಿದ್ದರೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಸಮಾಲೋಚಕರ ಬಳಿ ಸಖಿ ಮಹಿಳಾ ಸಾಂತ್ವನ ಕೇಂದ್ರಗಳಿಗೂ ಶಿಫಾರಸು ಮಾಡುತ್ತೇವೆ’ ಎಂದರು. ‘ಆಪ್ತ ಸಮಾಲೋಚನೆ ಅಗತ್ಯ ಇರುವವರು ಸಹಾಯವಾಣಿ ಸಂಖ್ಯೆ 08472236476 ಅಥವಾ 18004251448 ಸಂಪರ್ಕಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.