ADVERTISEMENT

SSLC Exam | ‘ಸೊನ್ನೆ’ ಸುತ್ತಿದ ಕಲ್ಯಾಣ ಕರ್ನಾಟಕದ 58 ಶಾಲೆಗಳು

ಶೂನ್ಯ ಫಲಿತಾಂಶ ಪಡೆದ ರಾಜ್ಯದ 6 ಸರ್ಕಾರಿ ಶಾಲೆಗಳ ಪೈಕಿ 5 ಶಾಲೆ ‘ಕಲ್ಯಾಣ ಕರ್ನಾಟಕ’ ಭಾಗದ್ದು

​ಪ್ರಜಾವಾಣಿ ವಾರ್ತೆ
Published 5 ಮೇ 2025, 4:38 IST
Last Updated 5 ಮೇ 2025, 4:38 IST
   

ಕಲಬುರಗಿ: 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಪೈಕಿ ಬಳ್ಳಾರಿ ಹೊರತುಪಡಿಸಿ ಇನ್ನುಳಿದ ಆರು ಜಿಲ್ಲೆಗಳ 58 ಶಾಲೆಗಳು ‘ಶೂನ್ಯ’ ಫಲಿತಾಂಶ ಪಡೆದಿವೆ.

ರಾಜ್ಯದಾದ್ಯಂತ ಒಟ್ಟು 144 ಶಾಲೆಗಳು ‘ಸೊನ್ನೆ’ ಸುತ್ತಿದ್ದು, ಅವುಗಳಲ್ಲಿ ಕಲಬುರಗಿ ವಿಭಾಗದ್ದೇ 58 ಶಾಲೆಗಳಿವೆ. ವಿಶೇಷ ತರಗತಿಗಳು, ಪರಿಹಾರ ಬೋಧನೆ, ಕಲಿಕಾ ಸರಿದೂಗಿಸುವಿಕೆ, ಪುನಶ್ಚೇತನ ಕಾರ್ಯಕ್ರಮಗಳು (ಮರುಸಿಂಚನಾ), ಘಟಕ ಪರೀಕ್ಷೆಗಳು, ಸರಣಿ ಪರೀಕ್ಷೆಗಳು ಸೇರಿದಂತೆ ಹತ್ತಾರು ಶೈಕ್ಷಣಿಕ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಷ್ಟೆಲ್ಲಾ ಸುಧಾರಣಾ ಕ್ರಮಗಳ ಹೊರತಾಗಿಯೂ ಫಲಿತಾಂಶ ಕುಸಿತ ಕಂಡಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಕೊನೆಯ ಸ್ಥಾನ ಪಡೆದಿರುವ ಕಲಬುರಗಿ ಜಿಲ್ಲೆ, ಶೂನ್ಯ ಫಲಿತಾಂಶ ಪಡೆದ ಶೈಕ್ಷಣಿಕ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಲಬುರಗಿ ಜಿಲ್ಲೆಯಲ್ಲಿ 27 ಶಾಲೆಗಳು ‘ಸೊನ್ನೆ’ ಸುತ್ತಿವೆ. ಉಳಿದಂತೆ ಬೀದರ್‌ನಲ್ಲಿ 19 ಶಾಲೆಗಳು, ರಾಯಚೂರಿನಲ್ಲಿ 6 ಶಾಲೆಗಳು, ವಿಜಯನಗರದಲ್ಲಿ 3 ಶಾಲೆಗಳು, ಯಾದಗಿರಿಯಲ್ಲಿ ಎರಡು ಶಾಲೆಗಳು, ಕೊಪ್ಪಳದಲ್ಲಿ ಒಂದು ಶಾಲೆ ‘ಶೂನ್ಯ’ ಫಲಿತಾಂಶ ಪಡೆದಿವೆ. ಶೈಕ್ಷಣಿಕ ಜಿಲ್ಲಾವಾರು ಶ್ರೇಣಿಯಲ್ಲಿ ಕೊನೆಯ 10 ಸ್ಥಾನಗಳಲ್ಲಿ ವಿಜಯನಗರ ಹೊರತುಪಡಿಸಿ ಕಲ್ಯಾಣ ಭಾಗದ ಆರು ಜಿಲ್ಲೆಗಳಿವೆ.

ADVERTISEMENT

ರಾಜ್ಯದಲ್ಲಿ ಶೂನ್ಯ ಫಲಿತಾಂಶ ಪಡೆದ 6 ಶಾಲೆಗಳ ಪೈಕಿ ಐದು ಶಾಲೆಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿವೆ. ನಾಲ್ಕು ಶಾಲೆ ಕಲಬುರಗಿ ಜಿಲ್ಲೆಯಲ್ಲಿದ್ದರೆ, ಒಂದು ಶಾಲೆ ಬೀದರ್‌ ಜಿಲ್ಲೆಯಲ್ಲಿದೆ.

ಕಲ್ಯಾಣ ಭಾಗದ ಆರು ಜಿಲ್ಲೆಗಳಲ್ಲಿ ಐದು ಸರ್ಕಾರಿ ಶಾಲೆಗಳಲ್ಲಿ 113 ವಿದ್ಯಾರ್ಥಿಗಳು, 13 ಅನುದಾನಿತ ಶಾಲೆಗಳಲ್ಲಿ 211 ಮಕ್ಕಳು, 40 ಖಾಸಗಿ ಶಾಲೆಗಳಲ್ಲಿ 274 ಮಂದಿ ಸೇರಿದಂತೆ 598 ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಒಬ್ಬರೂ ಉತ್ತೀರ್ಣರಾಗಿಲ್ಲ.

ಕಲಬುರಗಿ ಸ್ಥಿತಿ ಅಧೋಗತಿ:

ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ಸರ್ಕಾರಿ ಶಾಲೆ, ಏಳು ಅನುದಾನಿತ ಶಾಲೆ ಹಾಗೂ 16 ಖಾಸಗಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ‘ಸೊನ್ನೆ’ ಸುತ್ತಿವೆ.

ನಾಲ್ಕು ಸರ್ಕಾರಿ ಶಾಲೆಗಳ ಪೈಕಿ ಜೇವರ್ಗಿಯ ಶಾಲೆ, ಕಲಬುರಗಿ ನಗರದ ಶಾಲೆ, ಆಳಂದ ತಾಲ್ಲೂಕಿನ ಶಾಲೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸೇರಿವೆ. ಜೇವರ್ಗಿ ತಾಲ್ಲೂಕಿನ ಇಜೇರಿಯ ಮೌಲಾನಾ ಆಜಾದ್ ಮಾದರಿ ಶಾಲೆಯು ಅಲ್ಪಸಂಖ್ಯಾತರ ಇಲಾಖೆಗೆ ಸೇರಿದೆ.

ಅನುದಾನಿತ ಏಳು ಶಾಲೆಗಳ ಪೈಕಿ ಆರು ಶಾಲೆಗಳು ಕಲಬುರಗಿ ನಗರದಲ್ಲೇ ಇವೆ. ಒಂದು ಶಾಲೆ ಕಮಲಾಪುರದಲ್ಲಿದೆ. 4 ಸರ್ಕಾರಿ ಶಾಲೆಗಳಲ್ಲಿ ಒಟ್ಟು 88 ವಿದ್ಯಾರ್ಥಿಗಳು, 7 ಅನುದಾನಿತ ಶಾಲೆಗಳಲ್ಲಿ 113 ವಿದ್ಯಾರ್ಥಿಗಳು, 16 ಖಾಸಗಿ ಶಾಲೆಗಳಲ್ಲಿ 121 ಮಕ್ಕಳು ಸೇರಿದಂತೆ ಒಟ್ಟು 322 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಯಾರೊಬ್ಬರೂ ಪಾಸಾಗಿಲ್ಲ.

ಶಾಲೆಗಳ ಶೂನ್ಯ ಫಲಿತಾಂಶ ಕುರಿತು ವಿವರಣೆ ಪಡೆಯಲು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.