ADVERTISEMENT

ದೇವಲ ಗಾಣಗಾಪುರದಲ್ಲಿ ಸ್ವಚ್ಛ ಸಂಕೀರ್ಣ ಉದ್ಘಾಟನೆ

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೊಸ ಅಧ್ಯಾಯ; ಡಾ.ಆಕಾಶ್ ಶಂಕರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:51 IST
Last Updated 2 ಅಕ್ಟೋಬರ್ 2020, 16:51 IST
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ಸ್ವಚ್ಛೋತ್ಸವ–ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ.ಆಕಾಶ ಶಂಕರ ಅವರು ಮಹಿಳೆಯೊಬ್ಬರಿಗೆ ಕಸದ ಬುಟ್ಟಿ ನೀಡಿದರು
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ಸ್ವಚ್ಛೋತ್ಸವ–ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ.ಆಕಾಶ ಶಂಕರ ಅವರು ಮಹಿಳೆಯೊಬ್ಬರಿಗೆ ಕಸದ ಬುಟ್ಟಿ ನೀಡಿದರು   

ಕಲಬುರ್ಗಿ: ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ಹಾಗೂ ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದತ್ತಾತ್ರೇಯನ ಕ್ಷೇತ್ರವಾದ ದೇವಲ ಗಾಣಗಾಪೂರದಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ‘ಸ್ವಚ್ಛ ಸಂಕೀರ್ಣ’ ಸ್ಥಾಪಿಸಿರುವುದು ಹೊಸ ಅಧ್ಯಾಯ ನಿರ್ಮಿಸಿದಂತಾಗಿದೆ ಎಂದು ಪ್ರೊಬೇಷನರಿಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ ಹೇಳಿದರು.

ಶುಕ್ರವಾರ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಸ್ವಚ್ಛೋತ್ಸವ ನಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ಸ್ವಚ್ಛ ಸಂಕೀರ್ಣ’ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಏಕರೂಪ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಎಂ.ಡಿ.ಇಸ್ಮಾಯಿಲ್, ಮನೆಯಲ್ಲಿ ಕಸ ವಿಂಗಡಣೆ ಮಾಡಲು ಪ್ರತಿ ಮನೆಗೆ ಹಸಿ ಮತ್ತು ಒಣ ಕಸಕ್ಕಾಗಿ ಎರಡು ಡಬ್ಬಿಗಳನ್ನು ನೀಡಲಾಗುತ್ತದೆ. ಪ್ರತಿ ದಿನ ಸ್ವಚ್ಛತಾ ವಾಹಿನಿಯೊಂದಿಗೆ ಸಿಬ್ಬಂದಿ ಮನೆ–ಮನೆಗೆ ಕಸ ಸಂಗ್ರಹಣೆಗೆ ಬರಲಿದ್ದು, ಸಾರ್ವಜನಿಕರು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿರಿಸಿ ನೀಡುವ ಮೂಲಕ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ ಮಾತನಾಡಿ, ಜಿಲ್ಲೆಯ 264 ಗ್ರಾಮ ಪಂಚಾಯಿತಿಗಳಲ್ಲಿ ‘ಸ್ವಚ್ಛ ಸಂಕೀರ್ಣ’ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾಗುವ ಸಂಕೀರ್ಣ ವಿನ್ಯಾಸದ ಮಾದರಿಯೂ ಒಂದೇ ಇರಲಿದ್ದು, ಏಕರೂಪದ ಬ್ರ್ಯಾಂಡಿಂಗ್ ಹೊಂದಿರುವುದು ಇದರ ವಿಶೇಷವಾಗಿದೆ. ಇದೂವರೆಗೆ ಜಿಲ್ಲೆಯ 90 ಗ್ರಾಮ ಪಂಚಾಯತಿಗಳಲ್ಲಿ ಘಟಕ ಸ್ಥಾಪನೆಗೆ ಸರ್ಕಾರವು ಅನುಮೋದನೆ ನೀಡಿದ್ದು, ಪ್ರಸ್ತುತ 17 ಗ್ರಾಮ ಪಂಚಾಯತಿಗಳಲ್ಲಿ ಘಟಕಗಳು ಪೂರ್ಣಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದರು.

ಪ್ಲಾಸ್ಟಿಕ್ ಬದಲು ಅಡುಗೆ ಎಣ್ಣೆ: ದೇವಲ ಗಾಣಗಾಪುರ ಪಿ.ಡಿ.ಒ. ಗುರುನಾಥ ಹರಿದಾಸ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಒಂದು ಕೆ.ಜಿ. ಪ್ಲಾಸ್ಟಿಕ್ ನೀಡಿದಲ್ಲಿ 1 ಕೆ.ಜಿ. ಅಡುಗೆ ಎಣ್ಣೆ ನೀಡಲಾಗುವುದು ಎಂದು ತಿಳಿಸಿದರು.

ಘನ ಮತ್ತು ದ್ರವತ್ಯಾಜ್ಯದ ನಿರ್ವಹಣೆ, ವಿಲೇವಾರಿ ಕುರಿತು ಗ್ರಾಮಸ್ಥರಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 2ರಿಂದ 31ರವರೆಗೆ ಸ್ವಚ್ಛೋತ್ಸವ– ನಿತ್ಯೋತ್ಸವ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಸಾಂಕೇತಿಕವಾಗಿ ಐದು ಜನ ಗ್ರಾಮಸ್ಥರಿಗೆ ಮನೆಯಲ್ಲಿ ಕಸ ವಿಂಗಡಣೆ ಮಾಡಿ ಇಡುವ ಕಸದ ಡಬ್ಬಿಗಳನ್ನು ವಿತರಿಸಲಾಯಿತು. ಕಸ ಸಂಗ್ರಹಣೆಗೆ ಗ್ರಾಮದಲ್ಲಿ ಸಂಚರಿಸುವ ಸ್ವಚ್ಛ ವಾಹಿನಿಗೂ ಚಾಲನೆ ನೀಡಲಾಯಿತು.

ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಬಾಪುವಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಸಂಯೋಜಕ ಪಾಪರೆಡ್ಡಿ ಬಿ. ಶೇರಿಕಾರ, ಮಲ್ಲಿಕಾರ್ಜುನ ಕುಂಬಾರ, ಭಾಗಪ್ಪ, ಸಿಬ್ಬಂದಿಯಾದ ಸಿದ್ರಾಮ, ಶಿವಪ್ಪ ಪಟ್ಟೇದ ಇದ್ದರು.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಂಯೋಜಕಿ ಗುರುಬಾಯಿ ನಿರೂಪಿಸಿದರು. ತಾ.ಪಂ. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.