ADVERTISEMENT

ಅಂಗವಿಕಲತೆ ಶಾಪವಲ್ಲ: ಶಿವಮೂರ್ತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 8:57 IST
Last Updated 17 ಮಾರ್ಚ್ 2014, 8:57 IST

ಸೋಮವಾರಪೇಟೆ:  ಅಂಗವಿಕಲತೆ ಶಾಪವಲ್ಲ. ಆದರೆ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಎಲ್ಲರಂತೆ ಬದುಕು ಕಾಣಬೇಕು ಎಂದು ಲೋಕಾಯುಕ್ತ ನಿವೃತ್ತ ಎಸ್ಪಿ ಶಿವಮೂರ್ತಿ ಅಭಿಪ್ರಾಯಪಟ್ಟರು.

ಜಿಲ್ಲಾ ವಿಕಲಚೇತನರ ಸಂಘದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ತಾಲ್ಲೂಕುಮಟ್ಟದ ಅಂಗವಿಕಲರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರಲ್ಲೂ ವಿಶೇಷ ಪ್ರತಿಭೆಯಿರುತ್ತದೆ, ಆದರೆ, ಅದನ್ನು ಹೊರತರುವ ಕೆಲಸವಾಗುತ್ತಿಲ್ಲ. ಅಂತಹ ಪ್ರತಿಭೆಯನ್ನು ಸಮಾಜ ಮತ್ತು ಸರ್ಕಾರ ಗುರುತಿಸಿ ಪ್ರೋತ್ಸಹ ನೀಡಬೇಕು. ಅಂಗವಿಕಲರ ಬಗ್ಗೆ ಮರುಕಪಡುವುದನ್ನು ಬಿಟ್ಟು, ಅವರನ್ನು ಎಲ್ಲರಂತೆ ಸಮಾಜದಲ್ಲಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಇಂದು ಪ್ರತಿಯೊಂದು ಕಾಯಿಲೆಗಳಿಗೂ  ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದರಿಂದ ಪೋಷಕರು ಪ್ರಾರಂಭದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆಕೊಡಿಸಬೇಕು ಎಂದು ಸಲಹೆ ನೀಡಿದರು.

ಬೆನಕ ಡ್ರೈವಿಂಗ್ ಸ್ಕೂಲ್‌ನ ಮಾಲೀಕ ಪ್ರಶಾಂತ್ ಮಾತನಾಡಿ, ಸಂಘಗಳನ್ನು ಹುಟ್ಟುಹಾಕಿದಷ್ಟು ಸುಲಭವಾಗಿ ಕಟ್ಟಿ ಬೆಳೆಸುವುದು ಕಷ್ಟ. ಸಂಘ ಕಟ್ಟಲು ಆಹಂ ಬೇಡ. ಸದಸ್ಯರ ಹಿತಕಾಯುವ ಕೇಲಸವನ್ನು ಪದಾಧಿಕಾರಿಗಳು ಮಾಡ ಬೇಕು. ಅಂಗವಿಕಲರು ತಮ್ಮಲ್ಲಿರುವ ವಿಶಿಷ್ಟ ಶಕ್ತಿಯನ್ನು ಸಮಾಜ ಸುಧಾರಣೆಗೆ ಬಳಸಿಕೊಳ್ಳಬೇಕು ಎಂದ ಅವರು, ಸಾಧನೆಗೆ ಅಂಗವಿಕಲತೆ ಅಡ್ಡಿಯಾಗು ವುದಿಲ್ಲ ಎಂಬುದಕ್ಕೆ ಅನೇಕ ಸಾಧಕರ ಸಾಧನೆಗಳು ನಮ್ಮೆದುರಿಗೆ ಇದೆ ಎಂದರು.  

ಜಿಲ್ಲಾ ಸಮಿತಿಯ ಪೂರ್ಣಿಮಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲಾ ಅಂಗವಿಕಲರ  ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಶಾಕೀರ್, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಎಸ್. ಪಾವಸ್ತಿನ್ ಡಿಸೋಜ, ಬಿ.ಎಲ್. ಸಂಗಮೇಶ್, ಶಾಂತಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.