ADVERTISEMENT

ಅಂಗವಿಕಲ ಮಕ್ಕಳಿಗೆ ಅವಕಾಶ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:22 IST
Last Updated 6 ಡಿಸೆಂಬರ್ 2012, 9:22 IST

ವಿರಾಜಪೇಟೆ: ವಿಶೇಷ ಮಕ್ಕಳನ್ನು ಎಲ್ಲರಂತೆ ಕಾಣಬೇಕು. ಪೋಷಕರು, ಶಿಕ್ಷಕರ ಪಾತ್ರ ಈ ನಿಟ್ಟಿನಲ್ಲಿ ಹಿರಿದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವೈ.ಕೆ. ತಿಮ್ಮೆಗೌಡ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಇಲ್ಲಿಯ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರೂ ಅಂಗವಿಕಲರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಮಕ್ಕಳ ಪ್ರತಿಭೆ ಹೊರಹೊಮ್ಮಿಸುವ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳ ನಡುವೆ ಸ್ಪರ್ಧೆ ಏರ್ಪಡಿಸಬೇಕು ಎಂದರು. ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲ್ಲೂಕಿನ ವಿವಿಧೆಡೆಯ ಮಕ್ಕಳು ಭಾಗವಹಿಸಿದ್ದರು.

`ಪ್ರತಿಭೆ ಪ್ರೊ ತ್ಸಾಹಿಸಿ'
ಕುಶಾಲನಗರ: ಅಂಗವಿಕಲ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಸೂಕ್ತ ಅವಕಾಶ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜು ಚಂಗಪ್ಪ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನದ ವತಿಯಿಂದ ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಚಾರಣೆ ಅಂಗವಾಗಿ ಸೋಮವಾರ ನಡೆದ ಅಂಗವಿಕಲ ಮಕ್ಕಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನಂಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಲ್. ದೊಡ್ಡಸಿದ್ದಪ್ಪ ಮಾತನಾಡಿ, ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಕುಶಾಲನಗರ ವಲಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಎಚ್.ಎಂ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಲ್ನೂರು ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್. ಲೋಕೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್.ಕೆ.ಪ್ರಸಾದ್. ಪಿ.ಎಸ್. ಸರೋಜ, ಬಿ.ಎನ್. ಶೋಭಾ ಇದ್ದರು.

ಕುಶಾಲನಗರ ವಲಯದ ಐದು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳು ಪಾಲ್ಗೊಂಡು ಕ್ರೀಡಾ ಪ್ರತಿಭೆ ಮೆರೆದರು. ನಂತರ ಮಕ್ಕಳಿಗೆ ನಡಿಗೆ ಸ್ಪರ್ಧೆ, ಓಟ, ಕಪ್ಪೆಯಂತೆ ಕುಪ್ಪಳಿಸುವ ಹಾಗೂ ಜಿಗಿತದ ಸ್ಪರ್ಧೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.