ADVERTISEMENT

ಅಭಿವೃದ್ಧಿ ಕುಂಠಿತ: ಅಧ್ಯಕ್ಷರ ಮೇಲೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:55 IST
Last Updated 7 ಜನವರಿ 2012, 5:55 IST

ಗೋಣಿಕೊಪ್ಪಲು: ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್, ಸೋಲಾರ್ ಮಾರ್ಗದ ನಿರ್ವಹಣೆ ಮುಂತಾದ ಸಮಸ್ಯೆಗಳು ತಾಲ್ಲೂಕಿನಾದ್ಯಂತ ಜ್ವಲಂತವಾಗಿದ್ದರೂ ತಾ.ಪಂ.ಸದಸ್ಯರು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಶುಕ್ರವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಗಂಭೀರವಾಗಿ ಆರೋಪಿಸಿದರು.

ತಾ.ಪಂ.ಅಧ್ಯಕ್ಷ ಎಚ್.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ ಆರ್‌ಎಂಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಟಾಟು ಮೊಣ್ಣಪ್ಪ  ಹಾಗೂ  ದಯಾ ಚಂಗಪ್ಪ, ಹಿಂದಿನ ಸಭೆಯಲ್ಲಿ  ಈ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಅಧ್ಯಕ್ಷರು ನಿರ್ಣಯಗಳನ್ನು ಕಸದ ಬುಟ್ಟಿಗೆ ಎಸೆದು ಸಮಸ್ಯೆ ನಿವಾರಣೆ ಬಗ್ಗೆ ತೀವ್ರ ನಿರ್ಲಕ್ಷ್ಯ ತಾಳಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವನ್ಯ ಜೀವಿಗಳ ಕಾಟ ಅತಿಯಾಗಿದ್ದು, ನಿವಾರಣೆ ಬಗ್ಗೆ ಚರ್ಚಿಸಲು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ಜತೆಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ.

ಕಾರ್ಯನಿರ್ವಾಹಣಾಧಿಕಾರಿಗಳು ಅಧಿಕಾರಿಗಳನ್ನು ಬಿಗಿಹಿಡಿತದಲ್ಲಿ ಇಡದಿರುವುದೇ  ಗೈರುಹಾಜರಿಗೆ  ಕಾರಣ ಎಂದು  ಮೊಣ್ಣಪ್ಪ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜು ಮುಂದಿನ ಸಭೆಗೆ ಕಡ್ಡಾಯವಾಗಿ ಆಗಮಿಸಲು ಸೂಚಿಸಲಾಗುವುದು ಎಂದು  ಹೇಳಿದರು.

ಸದಸ್ಯೆ ಪಂಕಜ ಮಾತನಾಡಿ, ನಿರ್ಮಿತಿ ಕೇಂದ್ರದವರು ತಿತಿಮತಿ ಗಿರಿಜನ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ಆರಂಭಿಸಿ 6ತಿಂಗಳು ಕಳೆದರೂ ಶೇ.10 ರಷ್ಟು ಕೆಲಸ ನಡೆದಿಲ್ಲ. ಆದರೆ, ಈ ಕಾಮಗಾರಿಗೆ 32ಲಕ್ಷ ಹಣದಲ್ಲಿ ಈಗಾಗಲೆ ರೂ.15ಲಕ್ಷ ಹಣಪಡೆದುಕೊಂಡಿದ್ದಾರೆ. ನಡೆಸಿರುವ ಕಾಮಗಾರಿಯೂ ಅತ್ಯಂತ ಕಳಪೆಯಾಗಿದೆ. ಮರೂರು ಶಾಲೆಯ ತಡೆಗೋಡೆ ನಿರ್ಮಾಣಕ್ಕೂ 27ಲಕ್ಷ ಹಣದಲ್ಲಿ ರೂ.13ಲಕ್ಷ ಹಣ ಪಡೆದುಕೊಂಡಿದ್ದಾರೆ. ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ ಎಂದು ದೂರಿದರು.

ಜಮ್ಮಾ ಬಾಣೆ ಸಮಸ್ಯೆ ಪರಿಹರಿಸಿದಂತೆ ಜಿಲ್ಲೆಯ ಗಿರಿಜನರ ಸಮಸ್ಯೆಗಳನ್ನು ನಿವಾರಿಸಲು ಹೋರಾಡಿ. ಕನಿಷ್ಟ ಮೂಲ ಸೌಕರ್ಯ ಒದಗಿಸಲು ವಿಧಾನ ಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಮುಂದಾಗಲಿ ಎಂದು ಕೋರಿದರು.

ಸದಸ್ಯೆ ಊರ್ಮಿಳಾ ಮಾತನಾಡಿ  ಹುದಿಕೇರಿ ಸಮೀಪದ ಕೋಣಂಗೇರಿಯಲ್ಲಿ   ಶೌಚಾಲಯ,  ಬೀದಿದೀಪ, ಮನೆಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ, ಗ್ರಾ.ಪಂ.ಇವುಗಳ ನಿವಾರಣೆಯತ್ತ ಗಮನಹರಿಸುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.

 ಸಣ್ಣನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮನೆಮಾಡಿಕೊಂಡಿದೆ. ಯಾವುದೆ ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆಯುತ್ತಿಲ್ಲ. ದೇವನೂರು ನಾಲೆ, ದಿಡ್ಡಳ್ಳಿ, ಬಾಳೆಲೆ , ಮಡಿಕೆಬೀಡಿನ ಕೆರೆಗಳ ಕಾಮಗಾರಿ ತೀರ ಕಳಪೆಯಾಗಿದೆ. ತಿತಿಮತಿ ಚೆಕ್‌ಡ್ಯಾಮ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಎಲ್ಲಿ ನೋಡಿದರೂ ಭ್ರಷ್ಟಾಚಾರವೆ ತುಂಬಿ ಹೋಗಿದೆ ಎಂದು ಮೊಣ್ಣಪ್ಪ ಅಸಮಾಧಾನದಿಂದ ನುಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ  ಆಹಾರದ ಕೊರತೆ ಕಾಡುತ್ತಿದೆ ಎಂದು  ಉಪಾಧ್ಯಕ್ಷೆ ಧರಣಿ ಕಟ್ಟಿ ದೂರಿದರು. ಇದಕ್ಕೆ ಉತ್ತರಿಸಿದ  ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸದಾ ಶಿವಯ್ಯ ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆಗಿಂದಾಗ್ಗೆ ಮಕ್ಕಳ ತಜ್ಞರನ್ನು ಕರೆಸಿ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.