ADVERTISEMENT

ಅರಣ್ಯದಿಂದ ಪರಿಸರ ಸಮತೋಲನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:00 IST
Last Updated 22 ಮಾರ್ಚ್ 2012, 6:00 IST

ಮಡಿಕೇರಿ: ಅರಣ್ಯವಿದ್ದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶೋಕ ಜಿ. ನಿಜಗಣ್ಣವರ್ ಅವರು ಹೇಳಿದರು.

ಅರಣ್ಯ ಇಲಾಖೆಯ ಮಡಿಕೇರಿ ಪ್ರಾದೇಶಿಕ ವಿಭಾಗ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ  ನಗರದ ಅರಣ್ಯ ಭವನದ ಆವರಣದಲ್ಲಿ ವಿಶ್ವ ಅರಣ್ಯ ದಿನಾಚರಣೆ ಹಾಗೂ ಗ್ರಾಮ ಅರಣ್ಯ ಸಮಿತಿಗಳ ಕಾರ್ಯ ಚಟುವಟಿಕೆಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇ.30ರಷ್ಟಾದರೂ ಕಾಡು ಇರಬೇಕು. ಆದರೆ ಮನುಷ್ಯನ ಇತರ ಅವಶ್ಯಕತೆಗಳು ಹೆಚ್ಚಾದಂತೆ ಕಾಡು ನಾಶವಾಗುತ್ತ ಹೋಗುತ್ತಿದೆ. ಈಗಿರುವ ಅರಣ್ಯಪ್ರದೇಶವನ್ನಾದರೂ ಉಳಿಸಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಶೇ.37 ರಿಂದ 38ರಷ್ಟು ಅರಣ್ಯವಿದ್ದು, ಇನ್ನೂ ಹೆಚ್ಚಿನ ಅರಣ್ಯ ಬೆಳೆಸಲು ಸರ್ಕಾರಗಳು ವಿಶೇಷ ದೇಣಿಗೆ ನೀಡುವಂತಾಗಬೇಕು. ಶಾಲಾ-ಕಾಲೇಜುಗಳಲ್ಲಿ ಗಿಡಗಳನ್ನು ನೆಡಬೇಕು ಎಂದರು.

ಪರ್ತಕರ್ತ ಜಿ.ರಾಜೇಂದ್ರ ಅವರು ಮಾತನಾಡಿ, ಪ್ರಕೃತಿಯನ್ನು ಆರಾಧಿಸಬೇಕು ಆದರೆ ವಿಕೃತಿ ಮಾಡಬಾರದು. ಭೂ ಸಂಪನ್ಮೂಲಗಳನ್ನು ಸ್ವಾರ್ಥ ಸಾಧನೆಗಾಗಿ ಬಳಕೆ ಮಾಡಬಾರದು ಎಂದರು.

ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಮತ್ತು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಆನಂದ ಅವರು ಮಾತನಾಡಿದರು.
ಜಿಲ್ಲಾ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ಅವರು ಸುಸ್ಥಿರ ಜೀವನೋಪಾಯಕ್ಕಾಗಿ ಅರಣ್ಯಗಳು ವಿಷಯ ಕುರಿತು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಆಯುಕ್ತ ಎನ್.ಎಂ.ಶಶಿಕುಮಾರ್, ವಿರಾಜಪೇಟೆ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿ, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಿ.ಮೋಹನ್ ಕುಮಾರ್, ಟಿ.ಆರ್.ಪ್ರಸನ್ನಕುಮಾರ್, ಕ್ಲಬ್ ಮಹೀಂದ್ರದ ಪ್ರತಿನಿಧಿಗಳು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.