ಮಡಿಕೇರಿ: ಆಧಾರ್ ಜೋಡಣೆ ಆಗದಿ ರುವ ಪಡಿತರ ಚೀಟಿ ಕುಟುಂಬಗಳಿಗೆ ನೆರವಾಗಲು ‘ವಿಶೇಷ ಆಧಾರ್ ನೋಂದಣಿಗೆ ಶಿಬಿರ’ ಆಯೋಜಿಸು ವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪಡಿತರ ಚೀಟಿದಾರರು ಪಡಿತರ ಯೋಜನೆ ಅಡಿ ಆಹಾರ ಪದಾರ್ಥ ದೊರೆಯುತ್ತಿಲ್ಲ ಎಂದು ಅಲವತ್ತು ಕೊಳ್ಳುತ್ತಿದ್ದಾರೆ. ಮಡಿಕೇರಿ, ವಿರಾಜ ಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ವಿಶೇಷ ಶಿಬಿರ ಆಯೋಜಿಸಿ ಸಮಸ್ಯೆ ಬಗೆಹರಿಸಿ ಎಂದು ಮೂರು ತಾಲ್ಲೂಕಿನ ತಹಶೀಲ್ದಾರ್‌ಗೆ ಡಿಸಿ ಸೂಚಿಸಿದರು.
ಬಿಪಿಎಲ್‌ನ ಹಲವು ಕುಟುಂಬಗಳ ಪಡಿತರ ಕಾರ್ಡ್‌ಗಳು ಎಪಿಎಲ್ ಆಗಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂಬ ದೂರು ಗಳೂ ಇವೆ. ಅನರ್ಹ ಪತ್ತೆ ಕಾರ್ಯ ಚುರುಕುಗೊಳ್ಳಬೇಕು ಎಂದರು.
ಸೀಮೆಎಣ್ಣೆ ವಿತರಣೆ ಸಂಬಂಧ ಕೂಪನ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಪಡಿತರ ವಿತರಣೆಯಲ್ಲಿ ಸಾರ್ವಜನಿಕರಿಗೆ ರೀತಿ ತೊಂದರೆಯಾಗದಂತೆ ನೋಡಿಕೊಳ್ಳ ಬೇಕು. ಆ ನಿಟ್ಟಿನಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಆಧಾರ್ ಕಾರ್ಡ್ ಪಡೆಯದಿರುವವರಿಗೆ ಪಡಿತರ ವಿತರಿ ಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೇಷನ್ ಸ್ಥಗಿತಗೊಳಿಸಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಎಚ್ಚರಿಕೆ ನೀಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಒಟ್ಟು 92,624 ಪಡಿತರ ಚೀಟಿದಾರರು ಇದ್ದು, ಈ ಪೈಕಿ 89,759 ಪಡಿತರ ಕಾರ್ಡ್‌ಗಳಿಗೆ ಆಧಾರ್ ಜೋಡಣೆಯಾಗಿದೆ. ಉಳಿದ 2,855 ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ನಡೆಯಬೇಕಿದೆ. ಆಧಾರ್ ಸಂಖ್ಯೆ ನೀಡದಿರುವ ಸುಮಾರು 6,302 ಪಡಿತರ ಚೀಟಿಗಳು ಅಮಾನತು ಗೊಂಡಿವೆ ಎಂದು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಪಡಿತರ ಚೀಟಿದಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಸೋಮವಾರ ಸೋಮವಾರಪೇಟೆ, ಬುಧವಾರ ವಿರಾಜಪೇಟೆಗೆ ಹಾಗೂ ಶುಕ್ರವಾರ ಮಡಿಕೇರಿ ತಹಶೀಲ್ದಾರ್ ಕಚೇರಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ ಆಲಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜು, ತಹಶೀಲ್ದಾರರಾದ ಮಹದೇವ ಸ್ವಾಮಿ, ಶಿವಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡಕುಂಡಲು, ತಾ.ಪಂ. ಇಒಗಳಾದ ಚಂದ್ರಶೇಖರ್, ಜೀವನ್, ನಗರಸಭೆ ಆಯುಕ್ತೆ ಬಿ.ಬಿ.ಪುಷ್ಪಾವತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಂ.ರವಿಕುಮಾರ್ ಹಾಜರಿದ್ದರು.
ನಿವೇಶನ ರಹಿತರ ಮಾಹಿತಿ ನೀಡಿ
ಮಡಿಕೇರಿ: ಜಿಲ್ಲೆಯಲ್ಲಿ ನಿವೇಶನ ರಹಿತರ ಸಂಖ್ಯೆಯನ್ನು ಗ್ರಾಮ ಪಂಚಾಯತ್‌ವಾರು ನೀಡುವಂತೆ ಡಿಸಿ ರಿಚರ್ಡ್ ವಿನ್ಸೆಂಡ್ ಎಲ್ಲ ತಾ.ಪಂ. ಇಒಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ, ಘನ ತ್ಯಾಜ್ಯ ವಿಲೇವಾರಿ ಹಾಗೂ ಸ್ಮಶಾನ ಭೂಮಿ ಹಂಚಿಕೆ ಸಂಬಂಧ ಹಿಂದಿನಿಂದಲೂ ಚರ್ಚೆ ಮಾಡಿಕೊಂಡು ಬರಲಾಗಿದೆ. ಆದರೆ, ಪಂಚಾಯತಿ ವಶಕ್ಕೆ ನೀಡಲಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡಿಕೊಂಡಿಲ್ಲ ಎಂಬ ಎಂಬುದು ಸಭೆಯಲ್ಲಿ ಕೇಳಿಬಂತು.
ವಿರಾಜಪೇಟೆ ತಾ.ಪಂ. ಇಒ ಪೆಡ್ನೇಕರ್ ಮಾತನಾಡಿ, ತಾಲ್ಲೂಕಿನ 38 ಗ್ರಾ.ಪಂ.ಗಳಲ್ಲಿ 1449 ನಿವೇಶನ ರಹಿತ ಕುಟುಂಬಗಳಿವೆ. ಇವುಗಳಿಗೆ ನಿವೇಶನ ಒದಗಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಮಳೆ, ಬಿಸಿಲಿನಲ್ಲಿ ನಿಲ್ಲುತ್ತಾರೆ. ಕೂಡಲೇ ಶೆಲ್ಟರ್ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಾ.ಪಂ. ಇಒಗೆ ಡಿಸಿ ಸೂಚಿಸಿದರು.
ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಶೆಲ್ಟರ್ ಹಾಗೂ ಶೌಚಾಲಯ ನಿರ್ಮಾಣ ಸಂಬಂಧ ಗ್ರಾಮ ಸಭೆ ಯಲ್ಲಿ ತೀರ್ಮಾನಿಸಿ ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಪಿಡಿಒಗೆ ತಿಳಿಸಲಾಗುವುದು ಎಂಪಡ್ನೇಕರ್ ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.