ADVERTISEMENT

ಎಸ್ಸೆಸ್ಸೆಲ್ಸಿ: 9 ಸ್ಥಾನ ಕುಸಿದ ಕೊಡಗು

ಕಳೆದ ವರ್ಷಕ್ಕಿಂತ ಕಳಪೆ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:30 IST
Last Updated 8 ಮೇ 2018, 13:30 IST

ಮಡಿಕೇರಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊಡಗು ಜಿಲ್ಲೆಯು ಕಳಪೆ ಸಾಧನೆ ಮಾಡಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ, 9 ಸ್ಥಾನ ಕುಸಿದಿದೆ.

ಕಳೆದ ಸಾಲಿನಲ್ಲಿ ಶೇ 77.09 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದಲ್ಲಿ 9ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೇ 80.68 ಫಲಿತಾಂಶ ದಾಖಲಿಸಿದರೂ 18ನೇ ಸ್ಥಾನಕ್ಕೆ ಇಳಿದಿದೆ.

ಶೇ 3.59ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದ್ದರೂ ಕಳಪೆ ಸಾಧನೆ ಮಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ 127 ಶಾಲೆಗಳಿಂದ 7,166 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಐದು ಸ್ಥಾನದೊಳಗೆ ಜಿಲ್ಲೆ ಬರಬೇಕು ಎಂಬ ಜಿಲ್ಲಾಡಳಿತ ಕನಸು ಈ ಬಾರಿಯೂ ಕೈಗೂಡಲಿಲ್ಲ.

ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಹಲವು ಸಭೆ ನಡೆಸಿ, ಫಲಿತಾಂಶ ಸುಧಾರಣೆಗೆ ಸೂಚನೆ ನೀಡಿದ್ದರು. ವಿವಿಧ ಶಾಲೆಗಳಿಗೂ ಭೇಟಿ ನೀಡಿ ಶಾಲಾ ಮುಖ್ಯಸ್ಥರೊಂದಿಗೂ ಚರ್ಚಿಸಿದ್ದರು.

ADVERTISEMENT

‘ಫಲಿತಾಂಶದ ಸುಧಾರಣೆಗೆ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಶ್ರಮಿಸಿದ್ದರು. ಎರಡು ತಿಂಗಳು ಶಾಲೆಯಲ್ಲಿ ವಸತಿ ಸಹಿತ ಬೋಧನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಬಾರಿ ವಿಜ್ಞಾನ ವಿಷಯ ಕಠಿಣವಾಗಿತ್ತು. ಆದ್ದರಿಂದ, ಸ್ಥಾನದಲ್ಲಿ ಬದಲಾವಣೆ ಕಂಡಿದ್ದೇವೆ’ ಎಂದು ಡಿಡಿಪಿಐ ಎಚ್‌.ಜಿ. ಭಾಗ್ಯ ತಿಳಿಸಿದರು.

ಮಡಿಕೇರಿ– ಯುಕ್ತಶ್ರೀ ಅಯ್ಯಣ್ಣಗೆ 599 ಅಂಕ: ನಗರದ ಸೇಂಟ್‌ ಜೋಸೆಫ್‌ ಶಾಲೆಯ ವಿದ್ಯಾರ್ಥಿನಿ ಯುಕ್ತಶ್ರೀ ಅಯ್ಯಣ್ಣ 599 (ಶೇ 95.84) ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಡ- 121, ಇಂಗ್ಲಿಷ್ -98, ಹಿಂದಿ- 98, ಗಣಿತ -93, ವಿಜ್ಞಾನ- 91, ಸಮಾಜ- 98 ಅಂಕ ಬಂದಿದೆ. ಅದೇ ಶಾಲೆಯ ಪಿ.ಎಸ್. ಚಂದನಾ 598 (95.68) ಅಂಕ ಬಂದಿದೆ. ಸೇಂಟ್ ಮೈಲಕರ ಆಂಗ್ಲ ಮಾಧ್ಯಮ ಶಾಲೆಯ ಸಿ.ಎಸ್. ಸುಮನ್ 593 (94.88) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಕನ್ನಡ- 123, ಇಂಗ್ಲಿಷ್- 98, ಹಿಂದಿ -96, ಗಣಿತ- 94, ವಿಜ್ಞಾನ- 83, ಸಮಾಜ- 99 ಅಂಕ ಬಂದಿದೆ.

ಗೋಣಿಕೊಪ್ಪಲು– ಇಲ್ಲಿಯ ಲಯನ್ಸ್ ಶಾಲೆಯ 79 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಯುಕ್ತ ಕಾವೇರಪ್ಪ 605 ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅರುವತ್ತೊಕಲು ಸರ್ವದೈವತಾ ಶಾಲೆಯ ಅಕ್ಷತಾ ಕೂಡ 605 ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಶ್ರೀಮಂಗಲ ಜೆಸಿ ಪ್ರೌಢಶಾಲೆಗೆ ಶೇ 90.47 ರಷ್ಟು ಫಲಿತಾಂಶ ಬಂದಿದೆ. ಎಂ.ಬಿ.ಭೀಮಯ್ಯ 585 ಅಂಕಗಳಿಸಿದ್ದಾರೆ.
ಕುಶಾಲನಗರ– ಸೃಜನ್‌ ಪ್ರಥಮ: ಸಮೀಪದ ಹೆಬ್ಬಾಲೆ ಪ್ರೌಢಶಾಲೆ ವಿದ್ಯಾರ್ಥಿ ಎಚ್.ಸೃಜನ್ ಎಸ್ಸೆಸ್ಸೆಲ್ಸಿಯಲ್ಲಿ ಶೇ 94 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಒಟ್ಟು 625 ಅಂಕಗಳಿಗೆ 570 ಅಂಕಗಳನ್ನು ಗಳಿಸಿರುವ ಈತ ಕನ್ನಡ 125, ಇಂಗ್ಲಿಷ್ 86, ಹಿಂದಿ 96, ಗಣಿತ 99, ವಿಜ್ಞಾನ 85 ಹಾಗೂ ಸಮಾಜ ವಿಜ್ಞಾನದಲ್ಲಿ 89 ಅಂಕಗಳನ್ನು ಪಡೆದುಕೊಂಡಿದ್ದಾನೆ.

ಮುಖ್ಯಶಿಕ್ಷಕ ಬಸವರಾಜು ಶೆಟ್ಟಿ ಹಾಗೂ ಸಿಬ್ಬಂದಿ ಸೃಜನ್‌ನನ್ನು ಅಭಿನಂದಿಸಿದ್ದಾರೆ. ಈತ ಗ್ರಾಮದ ನಿವಾಸಿ ಎಚ್.ಸಿ.ಹರೀಶ್ ಹಾಗೂ ಶಿಕ್ಷಕಿ ಸಿ.ಕೆ.ಸುನೀತಾ ದಂಪತಿ ಪುತ್ರನಾಗಿದ್ದು, ಪೋಷಕರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದ ಸ್ರುಜನ್‌ಗೆ ಸಿಹಿ ಸಿನ್ನಿಸಿ ಸಂಭ್ರಮಿಸಿದರು.

ಶೇ 100 ಫಲಿತಾಂಶ

ಕುಶಾಲನಗರ: ಸಮೀಪದ ಕೂಡಿಗೆ ಸರ್ಕಾರಿ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಶೇ 100 ಫಲಿತಾಂಶ ಬಂದಿದೆ. ಒಟ್ಟು 46 ವಿದ್ಯಾರ್ಥಿಗಳ ಪೈಕಿ 5 ಮಂದಿ ಅತ್ಯುನ್ನತ ಶ್ರೇಣಿ, 37 ಮಂದಿ ಪ್ರಥಮ ಶ್ರೇಣಿ, 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಮೇಘರಾಜ್ ಹೆಚ್.ಯು.ಶೇ 90.40 ಮತ್ತು ಅನ್ವಿತಾ ಬಿ.ಎಂ. ಶೇ 87.20 ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಾಂಶುಪಾಲ ಪ್ರಕಾಶ್ ತಿಳಿಸಿದ್ದಾರೆ.

ಹಾಗೆಯೇ, ಗೋಣಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ಮಾಯಮುಡಿ, ಗುಡ್ಶಫರ್ಡ್ ಪ್ರೌಢಶಾಲೆ ಅಮ್ಮತ್ತಿ, ಪ್ರತಿಭಾ ಪ್ರೌಢಶಾಲೆ ಬಾಳೆಲೆ,ಲಯನ್ಸ್ ಪ್ರೌಢಶಾಲೆ– ಗೋಣಿಕೊಪ್ಪಲು ಇವು ಶೇ 100 ರಷ್ಟು ಫಲಿತಾಂಶ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.