ADVERTISEMENT

ಏರಿಕೆಯಾದ ಗೌರವ ವೇತನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 9:50 IST
Last Updated 15 ಜೂನ್ 2011, 9:50 IST

ಮಡಿಕೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ವೇತನ ಇದುವರೆಗೆ ಸಂದಾಯವಾಗಿಲ್ಲ.   ಈ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ನಡೆದ ಜಿಲ್ಲಾ ಒಕ್ಕೂಟದ ಸಭೆಯಲ್ಲಿ ಸಮಿತಿಯು ಈ ಒತ್ತಾಯ ವನ್ನು ಮಾಡಿದೆ. ಈಗಾಗಲೇ ನಿವೃತ್ತ ರಾದ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ರೂ 50 ಸಾವಿರ ಹಾಗೂ ರೂ 30 ಸಾವಿರ ನೀಡ ಬೇಕೆಂದು ಸಂಘ ಒತ್ತಾಯಿಸಿದೆ.

ಸಭೆಯಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದೆ.
ಬೇಡಿಕೆ:
ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಕ್ಕೆ ಕಾರ್ಯಕರ್ತೆಯರನ್ನು ನೇಮಿಸಬೇಕು. ಇದರಂತೆ ಖಾಲಿ ಇರುವ ಸಹಾಯಕಿಯರ ಹುದ್ದೆ ಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಸಹಾಯಕಿಯರ ಕೊರತೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆ  ಯರೇ ಆಹಾರ ತಯಾರಿಸುವುದು ಹಾಗೂ   ಇತರೆ ಕೆಲಸಗಳನ್ನು ಮಾಡಬೇಕಾಗಿದೆ. ತಕ್ಷಣವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ    ಇದರ ಬಗ್ಗೆ ಕ್ರಮಕೈಗೊಳ್ಳಬೇಕು.

ಅಂಗನವಾಡಿ ಕೇಂದ್ರಗಳಲ್ಲಿ ತೆರವಾಗಿರುವ ಕಾರ್ಯಕರ್ತೆಯರ ಹುದ್ದೆಗೆ ಅದೇ ಗ್ರಾಮದವರಾಗಿ ಬೇರೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆ ಅಂತಹ ಕೇಂದ್ರಕ್ಕೆ ವರ್ಗಾವಣೆ ಬಯಸಿದರೆ ಅವರಿಗೆ ಆದ್ಯತೆ ನೀಡಬೇಕು.

ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಸಹಾಯಕಿಯರಾಗಿ ಕಳೆದ ಹಲವಾರು    ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ       ಸೇವಾ ಹಿರಿತನದ ಮೇಲೆ ಅಂಗನ ವಾಡಿ ಹುದ್ದೆ ಬಯಸಿದಾಗ ಅವಕಾಶ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮನವಿ
ಸಾಮಾಜಿಕ-ಭದ್ರತಾ ಯೋಜನೆ ಯಡಿ ಬರುವ ಪಿಂಚಣಿದಾರರ ಸಮೀಕ್ಷೆ ಕೆಲಸದಲ್ಲಿ ಸಹಕರಿಸುವಂತೆ ಅಂಗನ ವಾಡಿ ಕಾರ್ಯಕರ್ತೆಯರಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಅವರು ಮನವಿ ಮಾಡಿದರು.

ಸಮೀಕ್ಷೆ ಕಾರ್ಯದಿಂದ ಕಾರ್ಯಕರ್ತೆಯರನ್ನು ಬಿಡುಗಡೆಗೊಳಿಸಬೇಕೆಂದು ಸಂಘದ ಪದಾಧಿಕಾರಿಗಳಾದ ಟಿ.ಪಿ. ರಮೇಶ್, ಕೆ.ಕೆ. ಶಾರದ, ಕೆ.ಎ. ಕಸ್ತೂರಿ, ಎನ್.ಕೆ. ಸೀತಮ್ಮ, ಎನ್.ಎ. ತಾರಾಮಣಿ, ತೊಯಾಕ್ಷಿ, ಅವರನ್ನೊಳಗೊಂಡ ನಿಯೋಗವು ಭೇಟಿ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಈ ಮನವಿ ಮಾಡಿಕೊಂಡರು.

ಜನಗಣತಿ, ಸದಾಶಿವ ಆಯೋಗದ ಗಣತಿ, ಪರಿಶಿಷ್ಟ ಜಾತಿ-ಪಂಗಡದವರ ಸಮೀಕ್ಷೆ ಕಾರ್ಯ ಮಾಡಿದ ಕಾರ್ಯಕರ್ತೆಯರಿಗೆ ಇದುವರೆಗೆ ಗೌರವಧನ ಸಂದಾಯವಾಗಿಲ್ಲ ಎಂದು ನಿಯೋಗದ ಸದಸ್ಯರು ಇದೇ ಸಂದರ್ಭದಲ್ಲಿ ಗಮನಕ್ಕೆ ತಂದರು.
ತಕ್ಷಣ ಪ್ರತಿಕ್ರಿಯಿಸಿದ ಚಂದ್ರೇಗೌಡ ಅವರು, ಗೌರವ ಧನ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಡಳಿತ ಮಂಡಳಿಗೆ ಆಯ್ಕೆ
ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಯರ ಹಾಗೂ ಸಹಾಯಕಿಯರ ಸಂಘಗಳ ಒಕ್ಕೂಟದ 2011-13ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಕೆ. ಶಾರದ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಕೆ. ಸೀತಮ್ಮ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಜಿಲ್ಲಾ ಅಧ್ಯಕ್ಷೆ ಕೆ.ಪಿ. ಕಾವೇರಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆ ಯಿತು. ಜಿಲ್ಲೆಯ ಮೂರು ತಾಲ್ಲೂಕಿಗೆ ಕಾರ್ಯಾ ಧ್ಯಕ್ಷರಾಗಿ ಡಿ.ಎಸ್. ಸರೋಜಾ, ಎಂ.ಬಿ. ಜಮುನ, ಬಿ.ಆರ್. ಸುಶೀಲಾ, ಕೋಶಾಧಿಕಾರಿ ಯಾಗಿ ಬಿ.ಎಂ. ಪುಷ್ಪಾವತಿ, ಸಹಕಾ ರ್ಯದರ್ಶಿಗಳಾಗಿ ಎಂ.ಎಂ. ನಿರ್ಮಲ, ಬಿ.ಕೆ. ಜಯಂತಿ ಹಾಗೂ ಮೋಹನಾಕ್ಷಿ ಆಯ್ಕೆ ಯಾಗಿದ್ದಾರೆ. ಜಿಲ್ಲೆಯಿಂದ ರಾಜ್ಯ ಸಮಿತಿಗೆ ಕೆ.ಪಿ. ಕಾವೇರಮ್ಮ ಆಯ್ಕೆಗೊಂಡರು.  ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಂಘಟನೆಯ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.