ADVERTISEMENT

ಒಗ್ಗಟ್ಟಿದ್ದರೆ ಅಭಿವೃದ್ಧಿ ಸಾಧ್ಯ: ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:50 IST
Last Updated 8 ಫೆಬ್ರುವರಿ 2012, 8:50 IST

ಗೋಣಿಕೊಪ್ಪಲು: ಯಾವುದೇ ಜನಾಂಗ ರಾಜಕೀಯ ಮತ್ತು ಆರ್ಥಿಕವಾಗಿ ಪ್ರಬಲವಾದಾಗ ಮಾತ್ರ  ಸಾಮಾಜಿಕವಾಗಿ ಮುಂದುವರಿಯಲು ಸಾಧ್ಯ  ಎಂದು ಬಾಳೆಲೆ ಕೆನರಾ ಬಾಂ್ಯಕ್ ಮ್ಯಾನೇಜರ್ ಕೆ.ಶ್ರೀನಿವಾಸ್ ಹೇಳಿದರು.

ಇಲ್ಲಿಗೆ ಸಮೀಪದ ಕೆ.ಬೊಯಿಕೇರಿಯಲ್ಲಿ ಈಚಿಗೆ ನಡೆದ ವಿರಾಜಪೇಟೆ ತಾಲ್ಲೂಕು ನಾಯಕ ಸಂಘದ ಸಭೆಯಲ್ಲಿ  ಅವರು ಮಾತನಾಡಿದರು.

`ಹಿಂದುಳಿದ ಜನಾಂಗ  ಶೈಕ್ಷಣಿಕವಾಗಿ ಮುಂದುವರಿಯಲು ಯತ್ನಿಸಬೇಕು. ಶಿಕ್ಷಣಕ್ಕಿಂತ ಪ್ರಬಲವಾದ ಅಸ್ತ್ರ  ಯಾವುದೂ  ಇಲ್ಲ. ಜ್ಞಾನದ ಮೂಲಕ ಬದುಕು ಕಂಡುಕೊಳ್ಳಲು ಯತ್ನಿಸಿದರೆ ಸಾರ್ಥಕತೆ ಹೊಂದಬಹುದು. ಸಾಮಾಜಿಕ ನ್ಯಾಯ ಶಿಕ್ಷಣದಿಂದ ಮಾತ್ರ ದೊರಕುತ್ತದೆ~ ಎಂದು ಹೇಳಿದರು.

ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣೆಗೌಡ, `ಸಂಘಟನೆಯಲ್ಲಿ ಶಕ್ತಿ ಇದೆ. ವಾಲ್ಮಿಕಿ ನಾಯಕ ಜನಾಂಗ ಅನೇಕ ಉಪ ಪಂಗಡಗಳಾಗಿ ಹರಿದು ಹಂಚಿಹೋಗಿದೆ. ಸರ್ಕಾರಿ ಸೌಲಭ್ಯಗಳು ಎಲ್ಲರಿಗೂ ಲಭಿಸುತ್ತಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ  ಸೌಲಭ್ಯಗಳು ನ್ಯಾಯೋಚಿತವಾಗಿ  ಲಭಿಸಬೇಕು~ ಎಂದು ಪ್ರತಿಪಾದಿಸಿದರು.

ಸಂಘದ ಅಧ್ಯಕ್ಷ ಪಿ.ಟಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಾಯಕ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ಮಲ್ಲಪ್ಪ,ಕಾರ್ಯದರ್ಶಿ ಕೆ.ಎನ್.ಅಶೋಕ್ ಹಾಜರಿದ್ದರು. ನಿವೃತ್ತ ಸೈನಿಕ ಶ್ರೀನಿವಾಸ್, ಪುಟ್ಟರಾಜು ಹಾಗೂ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ  ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.                      ಅಧ್ಯಕ್ಷರಾಗಿ ಪಿ.ಟಿ.ಸುರೇಶ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಪಿ.ಪಿ.ಸುರೇಶ್ , ರುಕ್ಮಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಮುತ್ತುರಾಜ್, ಸಂಘಟನಾ ಕಾರ್ಯದರ್ಶಿಯಾಗಿ  ಓಹಿಲೇಶ್,  ಸಹಕಾರ್ಯದರ್ಶಿಯಾಗಿ ಪಿ.ಎಸ್. ಮನೋಹರ್ ಆಯ್ಕೆಯಾದರು.

ನಿರ್ದೇಶಕರಾಗಿ  ಪಿ.ಸಿ.ನಾಗರಾಜು, ಪಿ.ಕೆ.ರಾಜು ,ಪಿ.ಎಸ್.ಸುರೇಶ್, ಪಿ.ಆರ್.ಗಿರೀಶ್, ಪಿ.ಆರ್.ಗೀತಾ, ಪ್ರಸನ್ನ, ಶರತ್, ಚಂದ್ರಹಾಸ್, ಲೋಹಿತಾಶ್ವ ಅವರನ್ನು ಆರಿಸಲಾಯಿತು. ಪಿ.ಪಿ.ಸುರೇಶ್ ಸ್ವಾಗತಿಸಿದರು. ಮನೋಹರ ವಂದಿಸಿದರು. ಕೆ.ಪಿ.ಹೇಮಲತಾ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.