ADVERTISEMENT

ಒಡೆಯನಪುರದಲ್ಲಿ ಹಾಳುಬಿದ್ದ ರಸ್ತೆ

ಶ.ಗ.ನಯನತಾರಾ
Published 18 ಸೆಪ್ಟೆಂಬರ್ 2013, 8:20 IST
Last Updated 18 ಸೆಪ್ಟೆಂಬರ್ 2013, 8:20 IST

ಶನಿವಾರಸಂತೆ: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. 
ಇಲ್ಲಿ 30 ಕುಟುಂಬಗಳಿವೆ. ಪರಿಶಿಷ್ಟ ಜಾತಿ–ಪಂಗಡದವರೇ ಅಧಿಕವಾಗಿರುವ ಗ್ರಾಮದ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಗ್ರಾಮಸ್ಥರ ದೂರು.

ಗ್ರಾಮದಲ್ಲಿ ಇರುವುದೊಂದೇ ರಸ್ತೆ. 20 ವರ್ಷಗಳಿಂದ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲ. ಡಾಂಬರು ಮತ್ತು ಚರಂಡಿ ಸೌಲಭ್ಯ ಇಲ್ಲದ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗುತ್ತದೆ. ಇದರಿಂದ ರಸ್ತೆಯಲ್ಲೇ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಾಟಾಗುತ್ತವೆ. ಇಲ್ಲಿ ವಾಹನವಿರಲಿ, ಪಾದಚಾರಿಗಳೂ ನಡೆದಾಡುವುದು ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.

ಇನ್ನು ವಿದ್ಯುತ್‌ ಸಮಸ್ಯೆ ಹೇಳುವಂತಿಲ್ಲ. ರಸ್ತೆಯಲ್ಲಿ 12 ವಿದ್ಯುತ್‌ ಕಂಬಗಳು ಹೆಸರಿಗೆ ಮಾತ್ರ ಇವೆ. ದೀಪಗಳು ಬೆಳಗುತ್ತಿಲ್ಲ. ಒಂದೇ ಒಂದು ವಿದ್ಯುತ್‌ ಕಂಬದಲ್ಲಿ 24 ಗಂಟೆಯೂ ದೀಪ ಉರಿಯುತ್ತಿರುತ್ತದೆ. ಬಂದ್‌ ಮಾಡಿದರೆ ಮತ್ತೆ ಉರಿಯುವುದಿಲ್ಲ ಎಂಬ ಭಯದಿಂದ ಗ್ರಾಮಸ್ಥರು ಆ ವಿದ್ಯುತ್‌ ದೀಪವನ್ನು ಆರಿಸುವುದೇ ಇಲ್ಲ!

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾತ್ರ ಈಚೆಗೆ ಸುಧಾರಿಸಿದೆ. ಇರುವ ಒಂದು ರಸ್ತೆಗೆ ಡಾಂಬರು ಹಾಕಿ, ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿದರೆ, ವಿದ್ಯುತ್‌ ಕಂಬಗಳಲ್ಲಿ ದೀಪ ಬೆಳಗುವಂತೆ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಒಡೆಯನಪುರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಇದ್ದರೂ, ಗ್ರಾಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.