ADVERTISEMENT

ಒತ್ತುವರಿ ತೆರವು ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:35 IST
Last Updated 7 ಫೆಬ್ರುವರಿ 2012, 5:35 IST

ಸೋಮವಾರಪೇಟೆ:  ಜಿಲ್ಲೆಯ ರೈತರು  ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸುವ ಕಂದಾಯ ಇಲಾಖೆಯ ಕ್ರಮದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ವಿವೇಕಾನಂದ ವೃತ್ತದಿಂದ ಸಿ.ಕೆ. ಸುಬ್ಬಯ್ಯ ಮಾರ್ಗವಾಗಿ ಮೆರವಣಿಗೆಯೊಂದಿಗೆ ಸಾಗಿದ ಪ್ರತಿಭಟನಾಕಾರರು ಬಿಜೆಪಿ, ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ಬಸ್ ನಿಲ್ದಾಣ ಮೂಲಕ ತಾಲೂಕು ಕಚೇರಿಗೆ ತೆರಳಿ  ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರೈತರು ಕಳೆದ ಇಪ್ಪತ್ತು ವರ್ಷಗಳಿಂದ ಈ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ದಿಢೀರ್ ಎಂದು ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ.
 
ಜಾಗದ ಹಕ್ಕುಪತ್ರ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಇನ್ನಾದರೂ ಕಂದಾಯ ಇಲಾಖೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಒತ್ತುವರಿ ಸಂಬಂಧ 15 ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಜಿಲ್ಲಾಧಿಕಾರಿಗಳು ಆ ಮೊಕದ್ದಮೆ ಹಿಂದಕ್ಕೆ ಪಡೆಯಬೇಕು. ಒತ್ತುವರಿ ತೆರವಿಗೆ ಮುಂದಾದರೆ ರೈತರು ಉಗ್ರ ಹೋರಾಟಕ್ಕೆ ಇಳಿಯುತ್ತಾರೆ.
 
ಕೆಲವು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಸರ್ಕಾರದ ಅಧಿಕಾರಿಗಳು ಸರ್ಕಾರಿ ಜಮೀನು ವಶಕ್ಕೆ ಕ್ರಮ ಜರುಗಿಸಲು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶನ ನೀಡಿರುವುದು ಖಂಡನೀಯ ಕ್ರಮ ಎಂದರು. ಒತ್ತುವರಿ ತೆರವಿಗೆ ಸರ್ಕಾರ ತಡೆಯಾಜ್ಞೆ ನೀಡಿದೆ ಎಂಬ ಶಾಸಕ ಅಪ್ಪಚ್ಚು ರಂಜನ್ ಅವರ ಹೇಳಿಕೆ ಹುರುಳಿಲ್ಲ. ಈ ಕುರಿತು ಸರ್ಕಾರದಿಂದ ಆದೇಶದ ಪ್ರತಿ ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲ ಶಾಸಕರು ಸುಳ್ಳು ಹೇಳಿಕೊಂಡು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಎಐಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಈ ಭೂಮಿಯಲ್ಲಿ ಕೃಷಿ ಕಾರ್ಯದ ಮೂಲಕ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ಜಮೀನು ವಶಕ್ಕೆ ನೋಟೀಸ್ ನೀಡಿರುವುದರಿಂದ ಆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರೈತರು ಬೀದಿಗೆ ಬೀಳುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

`ಕಂದಾಯ ಇಲಾಖೆ ನನ್ನ ಭೂಮಿ ಕಸಿದುಕೊಳ್ಳಲು ಮುಂದಾದರೆ ತಾಲ್ಲೂಕು ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈ ಭೂಮಿ ತಮಗಿರುವ ಏಕೈಕ ಆಸರೆ~ ಎಂದು ಒತ್ತುವರಿ ಸಂಬಂಧ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಯಲಕನೂರು ಗ್ರಾಮದ 83 ವಯಸ್ಸಿನ ರೈತ ಚಂದ್ರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಬ್ಲಾಕ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ಬಾಸ್, ಕಾರ್ಯಾಧ್ಯಕ್ಷ ಕೆ.ಎ. ಯಾಕೂಬ್, ಮಹಿಳಾ ಘಟಕದ ಪ್ರಮುಖರು, ಪಕ್ಷದ ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.