ADVERTISEMENT

ಕನ್ನಡಪರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:49 IST
Last Updated 24 ಮಾರ್ಚ್ 2014, 6:49 IST

ವಿರಾಜಪೇಟೆ: ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಗಟ್ಟಿಯಾದ ನೆಲೆಯಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕನ್ನಡ ಪರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕನ್ನಡದ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್‌ ಹೇಳಿದರು.

ಪಟ್ಟಣದ ಸರ್ಕಾರಿ  ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯದ ಆಧ್ಯಯನದಿಂದ ನಮ್ಮ ಹಿರಿಯರ ಬದುಕು, ಅವರ ಆಚಾರ– ವಿಚಾರಗಳನ್ನು ತಿಳಿದುಕೊಳ್ಳಬಹುದು. ಶಾಲಾಕಾಲೇಜುಗಳಲ್ಲಿ ನಡೆಸುವ ಕನ್ನಡಪರ ಕಾರ್ಯಕ್ರಮಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಎಂದಿಗೂ ಬೆಂಗಾವಲಾಗಿರುತ್ತದೆ ಎಂದು ತಿಳಿಸಿದರು.

ಪಿರಿಯಾಪಟ್ಟಣದ ಬೆಟ್ಟದಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎ.ಎನ್‌. ರವಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡು ಉನ್ನತವಾದ ಧ್ಯೇಯದೊಂದಿಗೆ ಜೀವನವನ್ನು ನಡೆಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕ ಮಂದಿ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ ಎಂದರು.

ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ರಚಿತವಾದ ‘ಕನ್ನಡ ವ್ಯಾಕರಣ ಸಂಗ್ರಹಣ ಮಾಲೆ’ ಹಾಗೂ ‘ಹಿರಿಯ ನಾಗರಿಕರ ಸಂದರ್ಶನ’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಸ್‌.ವಿ. ಅಪ್ಪಾಜಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಮಿತಿಯ ಕೋಶಾಧಿಕಾರಿ ವಾಸು ರೈ ಮಾತನಾಡಿದರು. ಉಪನ್ಯಾಸಕರಾದ ದೇವಾನಂದ್‌, ಡಾ.ಡಿ.ಕೆ. ಸರಸ್ವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.