ADVERTISEMENT

ಕರಿಕೆಯಲ್ಲಿ ಬಳುಕುವ ಜಲಕನ್ಯೆಯರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:21 IST
Last Updated 11 ಜುಲೈ 2013, 10:21 IST

ನಾಪೋಕ್ಲು: ಭಾಗಮಂಡಲದಿಂದ ಕರಿಕೆಗೆ ತೆರಳುವ ಹಾದಿಯುದ್ದಕ್ಕೂ ಈಗ ಜಲಕನ್ಯೆಯರ ನರ್ತನದ ಸೊಬಗು ಅರಳಿದೆ.
ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಅಲ್ಲಲ್ಲಿ ಜಲಧಾರೆಗಳು ಬೆಟ್ಟಗುಡ್ಡಗಳಿಂದ ಧುಮುಕುತ್ತಿದ್ದು ನೋಡುಗರ ಮನಸೆಳೆಯುತ್ತಿವೆ.

ತಲಕಾವೇರಿಯ ರಕ್ಷಿತಾರಣ್ಯದಿಂದ ಹರಿದು ಬರುವ ಜಲಧಾರೆಗಳು ಈ ರಸ್ತೆಯಲ್ಲಿ ತೆರಳುವ ಪ್ರಯಾಣಿಕರಿಗೆ ಮುದ ನೀಡುತ್ತವೆ. ದಾರಿಯುದ್ದಕ್ಕೂ ಝರಿಗಳು, ಜಲಪಾತಗಳು ಕಾಣುತ್ತಿದ್ದು, ಒಂದೊಂದರ ಚೆಲುವೂ ಭಿನ್ನ. ಕೆಲವು ಜಲಧಾರೆಗಳು ದೊಡ್ಡ ಜಲಪಾತಗಳಾಗಿ ರಸ್ತೆಯಂಚಿಗೆ ಭೋರ್ಗರೆದು ಧುಮುಕಿದರೆ ಮತ್ತೆ ಕೆಲವು ಬಂಡೆಗಲ್ಲುಗಳ ಮೇಲೆ ಬಳುಕುತ್ತ ಇಳಿಯುತ್ತವೆ. ಇನ್ನೂ ಕೆಲವು ಅಂಕುಡೊಂಕಿನ ಕೊರಕಲಿನಲ್ಲಿ ಸಾಗಿ ರಸ್ತೆಯನ್ನು ಕ್ರಮಿಸಿ ಇಳಿದು ಹೋಗುತ್ತವೆ.

ಕರಿಕೆಯ ಹಾದಿಯಲ್ಲಿ ಸಾಗಿದರೆ ಸಿಗುವ ಜಲಧಾರೆಗಳು ಒಂದೆರಡಲ್ಲ, ಕಿಲೋ ಮೀಟರಿಗೆ ಒಂದರಂತೆ ಹತ್ತಿಪ್ಪತ್ತು ಜಲಧಾರೆಗಳು ಕಾಣಸಿಗುತ್ತವೆ. ಸ್ಥಳೀಯರು ಪ್ರತಿಯೊಂದು ಜಲಧಾರೆಗೂ ಒಂದೊಂದು ಹೆಸರು ಇಟ್ಟಿದ್ದಾರೆ.

ಹಾಲಿನಂತೆ ಹರಿವ ಜಲಧಾರೆಗಳನ್ನು ವೀಕ್ಷಿಸಲು ಬೆಟ್ಟಸಾಲುಗಳಲ್ಲಿ ಅಡ್ಡಾಡಬೇಕಿಲ್ಲ. ರಸ್ತೆಯಂಚಿನಲ್ಲಿ ನಿಂತರೆ ಸಾಕು.

ಬೆಳ್ನೊರೆಯಂತೆ ಕಾಣುವ ಜಲಪಾತಗಳ ಚೆಲುವು ಮನಸೂರೆಗೊಳ್ಳುತ್ತದೆ. ನಡು ಮಳೆಗಾಲದ ಬಳಿಕ ರಸ್ತೆಗೇ ಧುಮುಕುವ ಜಲಪಾತಗಳು ಮತ್ತಷ್ಟು ಮೋಹಕವೆನಿಸುತ್ತವೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತಗಳು ಕಾಣಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.