ADVERTISEMENT

ಕಳಪೆ ಕಾಮಗಾರಿ: ಲೋಕಾಯುಕ್ತ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 7:35 IST
Last Updated 18 ಅಕ್ಟೋಬರ್ 2012, 7:35 IST

ವಿರಾಜಪೇಟೆ:  ಇಲ್ಲಿಯ ಮುಖ್ಯ ರಸ್ತೆಯಿಂದ ಸುಣ್ಣದ ಬೀದಿ ಮಾರ್ಗವಾಗಿ ಗೋಣಿಕೊಪ್ಪ ರಸ್ತೆಗೆ ತೆರಳುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಮೇರೆಗೆ ಬುಧವಾರ ಆಗಮಿಸಿದ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ತನಿಖೆ ಆರಂಭಿಸಿದರು.

ಸುಣ್ಣದ ಬೀದಿಯ ಕಾಂಕ್ರೀಟ್ ರಸ್ತೆ ಕಳಪೆಯಾಗಿದೆ ಎಂದು ಜಯ ಕರ್ನಾಟಕ ಸಂಘದ ವಿರಾಜಪೇಟೆ ನಗರ ಸಮಿತಿಯ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಅವರು ರಾಜ್ಯ ಲೋಕಾಯುಕ್ತಕ್ಕೆ 2012ರ ಆಗಸ್ಟ್‌ನಲ್ಲಿ ದಾಖಲೆ ಸಮೇತ ದೂರು ಸಲ್ಲಿಸಿದ್ದರು.

ಲೋಕಾಯುಕ್ತ ಸಹಾಯಕ ಎಂಜಿನಿಯರ್ ಪ್ರಸಾದ್‌ಕುಮಾರ್ ಕಾಂಕ್ರೀಟ್ ರಸ್ತೆಯನ್ನು ಅಳತೆ ಮಾಡಿದರು. ಪ್ರಯೋಗಾಲಯಕ್ಕೆ ಕಳಿಸುವ ಸಲುವಾಗಿ ರಸ್ತೆಯ ಮಧ್ಯಭಾಗದಲ್ಲಿ ಒಂದು ಕಡೆ 18 ಇಂಚುಗಳಷ್ಟು ಅಗೆದು ಕಾಂಕ್ರೀಟ್‌ನ ಮಾದರಿಯನ್ನು ತೆಗೆದರು. ಇದನ್ನು ಪರೀಕ್ಷೆಗಾಗಿ ಮೈಸೂರಿನ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅಧಿಕಾರಿಗಳ ಸಹಾಯಕ ಎಂಜಿನಿಯರ್ ಸುಬ್ರಮಣ್ಯ ಕಾರಂತ್ ಹೇಳಿದರು.

ಪಟ್ಟಣ ಪಂಚಾಯಿತಿಯ ಕಿರಿಯ ಎಂಜಿನಿಯರ್ ಎಂ.ಸಿ.ಪುಟ್ಟುಸ್ವಾಮಿ ಅವರಿಂದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ದಾಖಲೆಗಳನ್ನು ಪರಿಶೀಲಿಸಿದ ಅವರು ತನಿಖೆಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಪಡೆದರು.

ಮುಖ್ಯಾಧಿಕಾರಿ ಎಚ್.ಆರ್.ರಮೇಶ್ ಕಾಂಕ್ರೀಟ್ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ಮೈಸೂರಿನ ಗುತ್ತಿಗೆದಾರರ ಎಚ್.ಆರ್.ಶಿವಕುಮಾರ್ ಅವರಿಗೆ ಕಾಮಗಾರಿಗೆ ಸಂಬಂಧಿಸಿದಂತೆ ರೂ. 42ಲಕ್ಷ ಪಾವತಿಗೆ ಬಾಕಿ ಇದ್ದು ಇದನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ಜಯ ಕರ್ನಾಟಕ ಸಂಘದ ವಿನೋದ್, ವಿವೇಕ್, ಮತಾಯ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್.ಎಚ್.ಮತೀನ್, ಬಿ.ಕೆ.ಚಂದ್ರು, ಚೇಂಬರ್ ಆಫ್ ಕಾಮರ್ಸ್‌ನ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಪಿ.ಕಾಶಿ ಕಾವೇರಪ್ಪ, ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ನಾಯಕಂಡ ಬೋಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬ್ದುಲ್ ಲತೀಫ್, ಕೆ.ಪಳನಿ ಪ್ರಕಾಶ್ ಹಾಜರಿದ್ದರು.

ಹಿನ್ನೆಲೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಸುಣ್ಣದ ಬೀದಿಯ ಡಾಂಬರ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗಿತ್ತು. ಸುಮಾರು 430 ಮೀಟರ್ ಉದ್ದದ ರಸ್ತೆಗೆ ರೂ. 87 ಲಕ್ಷ ವೆಚ್ಚ ಮಾಡಲಾಗಿತ್ತು. 2011ರ ಡಿಸೆಂಬರ್‌ನಲ್ಲಿ ಈ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಬಿಡುಗಡೆ ಮಾಡಲಾಗಿತ್ತು.

ವಾಹನ ಸಂಚಾರ ಆರಂಭಗೊಂಡ 30 ದಿನಗಳಲ್ಲಿಯೇ ಕಾಂಕ್ರೀಟ್ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಅನನುಕೂಲ ಉಂಟಾಗಿತ್ತು. ಈ ಕುರಿತು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸದಸ್ಯರು, ಗುತ್ತಿಗೆದಾರರು, ಕಿರಿಯ ಎಂಜಿನಿಯರರನ್ನು ತರಾಟೆಗೆ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.