ADVERTISEMENT

ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 18:55 IST
Last Updated 21 ಆಗಸ್ಟ್ 2012, 18:55 IST

ಗೋಣಿಕೊಪ್ಪಲು: ಅರಣ್ಯವನ್ನು ಮರೆತು ಕಳೆದ ಒಂದು ತಿಂಗಳಿನಿಂದ ತಿತಿಮತಿ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ತಂಗಿದ್ದ ಕಾಡಾನೆಗಳಲ್ಲಿ 15 ಆನೆಗಳನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಮಂಗಳವಾರ ಯಶಸ್ವಿಯಾಗಿದೆ.

ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ವಲಯ ಅರಣ್ಯಾಧಿಕಾರಿಗಳಾದ ಗೋಪಾಲ್, ದೇವರಾಜು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ತಂಡದಲ್ಲಿ ವಿಶೇಷ ಹುಲಿ ಸಂರಕ್ಷಣಾ ಪಡೆಯ (ಎಸ್‌ಟಿ ಪಿಎಫ್) 25 ಮಂದಿ ಸಿಬ್ಬಂದಿ ಸಹ ಪಾಲ್ಗೊಂಡಿದ್ದರು. ನೂರಾರು ಅರಣ್ಯ ಸಿಬ್ಬಂದಿಯಿದ್ದ ತಂಡವನ್ನು 3ಗುಂಪುಗಳಾಗಿ ವಿಂಗಡಿಸಿ ಏಕ ಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಮೊದಲು ಕಾರ್ಯಾಚರಣೆಯನ್ನು ತಿತಿಮತಿಯ ನೋಕ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಫಿ ತೋಟದಿಂದ ಆರಂಭಿಸಲಾಯಿತು. ಕಲ್ತೋಡು ಭಾಗದ ಕಾಫಿ ತೋಟದಲ್ಲಿ ತಂಗಿದ್ದ 8 ಕಾಡಾನೆಗಳು ಸಂಜೆ 4 ಗಂಟೆ ವೇಳೆಗೆ ಮರಳಿ ಕಾಡಿನತ್ತ ತೆರಳಿದವು. ಭದ್ರಗೋಳ ಭಾಗದಲ್ಲಿ ತಂಗಿರುವ ಐದಾರು ಕಾಡಾನೆಗಳು ಮಾತ್ರ  ಕಾಡಿನತ್ತ ತೆರಳದೇ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಾಡುತ್ತ ಕಾರ್ಯಾಚರಣೆ ತಂಡವನ್ನು ಸತಾಯಿಸುತ್ತಿದ್ದವು. ಕೊನೆಗೂ ಸಂಜೆಯ ಸಮಯದಲ್ಲಿ ಮತ್ತೆ ಏಳು ಆನೆಗಳು ಅರಣ್ಯದತ್ತ ಓಡಿದವು.

ಅರಣ್ಯಾಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದರಿಂದ ಯಾವುದೇ ಅನಾಹುತ ಸಂಭವಿಸದಂತೆ ತಿತಿಮತಿ ಸುತ್ತಮುತ್ತಲಿನ ಶಾಲಾ ಕಾಲೇಜಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ತಿತಿಮತಿ  ಕೋಣನಕಟ್ಟೆ ನಡುವಿನ ರಸ್ತೆ ಸಂಚಾರ ಕೂಡ ಬಂದ್ ಆಗಿತ್ತು.
ಕಳೆದ ಒಂದು ತಿಂಗಳಿನಿಂದ ಕಾಫಿ ತೋಟದಲ್ಲಿಯೇ ತಂಗಿದ್ದ ಕಾಡಾನೆಗಳ ಹಿಂಡು ಕಾಫಿ, ತೆಂಗು, ಅಡಿಕೆ, ಬಾಳೆ ಮುಂತಾದವನ್ನು ತಿಂದು, ತುಳಿದು ನಾಶಪಡಿಸಿದ್ದವು. ಅಲ್ಲದೇ ಇದೀಗ  ನಾಟಿ ಮಾಡಿರುವ ಭತ್ತದ ಗದ್ದೆಗಳನ್ನೂ ತುಳಿದು ಹಾನಿ ಮಾಡಿದ್ದವು. ಕಾಫಿ ತೋಟದಲ್ಲಿ ತಂಗಿರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ತನಕ ಕಾರ್ಯಾಚರಣೆ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.