ADVERTISEMENT

ಕಾನೂನಿನ ಎನ್‌ಕೌಂಟರ್ನಿಂದ ಸಿಎಂ ತಪ್ಪಿಸಿಕೊಳ್ಳಲಾಗದು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:50 IST
Last Updated 3 ಫೆಬ್ರುವರಿ 2011, 8:50 IST

ಮಡಿಕೇರಿ: ‘ವಿಧಾನಸೌಧದ ಸುತ್ತಲಿನ ರಾಜಭವನ, ಹೈಕೋರ್ಟ್ ಹಾಗೂ ಲೋಕಾಯುಕ್ತ ಕಚೇರಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸುತ್ತುವರೆದಿವೆ.ಇದರಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ಸಿಎಂ ಕಾನೂನಿನ ‘ಎನ್‌ಕೌಂಟರ್’ಗೆ ಗುರಿಯಾಗಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಬುಧವಾರ ಇಲ್ಲಿ ಹೇಳಿದರು.

ಕಾವೇರಿ ಹಾಲ್‌ನಲ್ಲಿ ನಡೆದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಅಧಿಕಾರದಿಂದ ಕೆಳಗಿಳಿಯುವ ಭಯ ಬಂದಿದೆ. ಹೀಗಾಗಿ, ಜೀವ ಭಯವಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಕೇವಲ ಬಿಜೆಪಿ ಮುಖ್ಯಮಂತ್ರಿಯಲ್ಲ.ನಮ್ಮ ರಾಜ್ಯದ ಮುಖ್ಯಮಂತ್ರಿ. ಒಂದು ವೇಳೆ ನಿಜವಾಗಿಯೂ ಅವರಿಗೆ ಜೀವ ಭಯ ಇದ್ದರೆ ನಮ್ಮ ಕಾಂಗ್ರೆಸ್ ಸೇವಾ ದಳದ ದಟ್ಟುಮುಟ್ಟಾದ ಕಾರ್ಯಕರ್ತರನ್ನು ರಕ್ಷಣೆಗೆ ಕಳಿಸಲು ಸಿದ್ಧ’ ಎಂದು ಪುನರುಚ್ಚರಿಸಿದರು.

‘2008ರ ಚುನಾವಣಾ ಪ್ರಣಾಳಿಕೆಯಲ್ಲಿ ‘ಸಮೃದ್ಧ ಕರ್ನಾಟಕ’ ಎಂಬ ಅಭಿವೃದ್ಧಿ ಮಂತ್ರ ಜಪಿಸಿದ ಬಿಜೆಪಿ, ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರನ್ನು ಮಾದರಿಯನ್ನಾಗಿಟ್ಟುಕೊಂಡು ರಾಜಕಾರಣ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಭ್ರಷ್ಟಾಚಾರ ನಡೆಸುವುದೇ ಕರ್ನಾಟಕದ ಸಮೃದ್ಧಿಯಾ?’ ಎಂದು ಪ್ರಶ್ನಿಸಿದರು.‘ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ 30 ಸಾವಿರ ಕೋಟಿ ರೂಪಾಯಿ ಸಾಲ ಮಾಡಲಾಗಿತ್ತು. ಈ ಹಣವನ್ನು ರಸ್ತೆ ಅಭಿವೃದ್ಧಿ, ಕೆರೆಗಳ ಹೂಳೆತ್ತುವುದು, ಶಿಕ್ಷಣ, ಆಸ್ಪತ್ರೆಗಳ ನಿರ್ಮಾಣದಂತಹ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಾಗಿತ್ತು. ಆದರೆ, ಯಡಿಯೂರಪ್ಪ ಸರ್ಕಾರ 90 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದು ಯಾವ ಉದ್ದೇಶಕ್ಕೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘2010-11ನೇ ಸಾಲಿನ ಬಜೆಟ್‌ನಲ್ಲಿ ಶೇ 60.7ರಷ್ಟು ಹಣವನ್ನು ಖರ್ಚು ಮಾಡಲು ಸಾಧ್ಯವಾಗಿದೆ. ಫೆಬ್ರುವರಿ ಮೂರನೇ ವಾರದಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವುದಾಗಿ ಪ್ರಕಟಿಸಿದ್ದಾರೆ. ಆದರೆ, ಕೇವಲ ಇನ್ನುಳಿದ 21-22 ದಿನಗಳಲ್ಲಿ ಬಜೆಟ್‌ನ ಬಾಕಿ ಉಳಿದ ಶೇ 40ರಷ್ಟು ಹಣ ಖರ್ಚು ಮಾಡಲು ಸಾಧ್ಯವೇ? ಉಳಿದ ಹಣ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು. ಒಟ್ಟಾರೆ, ರಾಜ್ಯದ ಹಣಕಾಸಿನ ಸ್ಥಿತಿಗತಿ ಬಗ್ಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು’ ಎಂದು ಪರಮೇಶ್ವರ್ ಒತ್ತಾಯಿಸಿದರು.

‘ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೊದಲ ಹೋರಾಟ ಸಭೆ ನಡೆಸಲಾಗಿದ್ದು, ಮೈಸೂರಿನಲ್ಲಿ ವಿಭಾಗ ಮಟ್ಟದ ಪ್ರತಿಭಟನೆಯನ್ನು ಈ ತಿಂಗಳ 20ರಂದು ನಡೆಸಲಾಗುತ್ತಿದೆ’ ಎಂದರು.

ವೀಣಾ ಅಚ್ಚಯ್ಯ ಸೇವೆ ಅಭಿನಂದನೀಯ: ‘ಆರು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಉತ್ತಮ ಕೆಲಸ ನಿರ್ವಹಿಸಿದ ವೀಣಾ ಅಚ್ಚಯ್ಯ ಸೇವೆ ಅಭಿನಂದನೀಯ. ಅಧ್ಯಕ್ಷ ಸ್ಥಾನದಿಂದ ತೆಗೆದರು ಎಂದು ಅವರು ಮುಂದೆಯೂ ನಿರಾಶರಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲರ ಸೇವೆಯನ್ನು ಗುರುತಿಸುತ್ತದೆ. ಹಾಗೆಯೇ, ನಿಮ್ಮನ್ನೂ ಗುರುತಿಸುತ್ತದೆ ಎಂಬ ಸೂಕ್ಷ್ಮವನ್ನು ಬಿಚ್ಚಿಡುತ್ತಿದ್ದೇನೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಇಂಗಿತ ವ್ಯಕ್ತಪಡಿಸಿದರು.

‘ಕೊಡಗಿನಲ್ಲಿ ಒಬ್ಬ ಯುವ ಮುಖಂಡನನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇಮಕ ಮಾಡಿದ್ದಾರೆ. ನಾಯಕರನ್ನು ಒಟ್ಟಿಗೆ ಸೇರಿಸಿಕೊಂಡು ಪಕ್ಷ ಕಟ್ಟುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ರಾಜ್ಯದಲ್ಲಿ ಬಿಜೆಪಿ ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ, ಪಕ್ಷ ಸಂಘಟನೆ ಅಷ್ಟು ಸುಲಭದ ಕೆಲಸವಲ್ಲ ಎಂಬುದೂ ನನಗೆ ಗೊತ್ತು. ಆದರೆ, ಸಂಕಷ್ಟದ ಸ್ಥಿತಿಯಲ್ಲಿಯೂ ಪಕ್ಷವನ್ನು ಸದೃಢವಾಗಿ ಕಟ್ಟುವ ಆತ್ಮಸ್ಥೈರ್ಯ ಇದೆ. ಕೆಪಿಸಿಸಿ ಕೂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಬೇಕು. ಈ ಬಾರಿಯ ಅವಕಾಶವನ್ನು ಬಿಟ್ಟುಕೊಡಲೇಬಾರದು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.