ADVERTISEMENT

ಕಾನೂನು ಸಹಾಯ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 6:39 IST
Last Updated 14 ಮಾರ್ಚ್ 2014, 6:39 IST

ಕುಶಾಲನಗರ: ಗ್ರಾಮೀಣ ಜನರಿಗೆ ಉಚಿತ ಕಾನೂನು ಸೇವೆ ನೀಡಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಮಟ್ಟದ ಕಾನೂನು ಸಂರಕ್ಷಣೆ ಮತ್ತು ಸಹಾಯ ಕೇಂದ್ರ ಉದ್ಘಾಟಿಸಲಾಗಿದೆ ಎಂದು ಸೋಮವಾರಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿತೇಂದ್ರನಾಥ್ ಹೇಳಿದರು.

ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆರಂಭಗೊಂಡ ಗ್ರಾಮೀಣ ಮಟ್ಟದ ಕಾನೂನು ಸಂರಕ್ಷಣೆ ಮತ್ತು ಸಹಾಯ ಕೇಂದ್ರದ ಉದ್ಘಾಟನಾ ಸಮಾರಂಭರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯಕೇಂದ್ರ ಎಷ್ಟು ಮುಖ್ಯವೋ ಅದೇ ರೀತಿ ಉಚಿತ ಕಾನೂನು ಸೇವಾ ಕೇಂದ್ರ ಕೂಡ ಅತಿ ಮುಖ್ಯ ಎಂದರು.

ಇಂದಿಗೂ ಗ್ರಾಮೀಣ ಭಾಗದ ಜನತೆ ಸರ್ಕಾರದ ಯಾವುದಾದರೊಂದು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಕೂಡ ಗೊಂದಲದಲ್ಲಿರುತ್ತಾರೆ. ಇಂತಹ ಹಲವು ಸಮಸ್ಯೆಗಳ ಸಲಹೆ ಸೂಚನೆಗಳನ್ನು ಉಚಿತವಾಗಿ ನೀಡಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಪಡೆದುಕೊಳ್ಳುವಂತೆ ಮಾಡಬೇಕಾಗಿರುವುದರಿಂದ ಸರ್ಕಾರ ಉಚಿತ ಕಾನೂನು ಸಹಾಯ ಕೇಂದ್ರಗಳನ್ನು ಆರಂಭಿಸಿದೆ ಎಂದರು.

ಸಹಾಯಕೇಂದ್ರದ ಕಚೇರಿಯನ್ನು ಉದ್ಘಾಟಿಸಿದ ಸೋಮವಾರಪೇಟೆ ಅಪರ ಸಿವಿಲ್ ನ್ಯಾಯಾಧೀಶ ಬಿ.ಎ. ಅಬ್ದುಲ್ ಖಾದರ್ ಮಾತನಾಡಿ ಜನಸಾಮಾನ್ಯರು ಕಾನೂನಿನ ಯಾವುದೇ ತೊಡಕು ಅನುಭವಿಸುವ ಬದಲು ಪಂಚಾಯಿತಿ ಮಟ್ಟದಲ್ಲಿ ದೊರೆಯುವ ಉಚಿತ ಕಾನೂನು ಸೇವೆಯನ್ನು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, ಸಮಾಜದ ಕಟ್ಟಕಡೆಯ ಜನರಿಗೂ ದೇಶದ ಕಾನೂನಿನಿಂದ ನ್ಯಾಯ ದೊರೆಯಬೇಕು ಎಂಬ ದೃಷ್ಟಿಯಿಂದ ಆರಂಭಿಸಿರುವ ಈ ಸಹಾಯಕೇಂದ್ರದಲ್ಲಿ ಸ್ವಯಂ ಸೇವಕರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿ ಇದರ ಉಪಯೋಗವನ್ನು ಜನರಿಗೆ ದೊರಕಿಸಿಕೊಡುವಂತೆ ಸಲಹೆ ನೀಡಿದರು.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಪುಟ್ಟರಾಜು, ವಕೀಲ  ಕೆ.ಎಸ್. ಪದ್ಮನಾಭ, ಕುಶಾಲನಗರ ವಕೀಲರ ಸಂಘದ ಪ್ರಮುಖರಾದ ಕೆ.ಬಿ. ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.