ADVERTISEMENT

ಕಾನೂನು- ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ: ಎಸಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 9:05 IST
Last Updated 19 ಜನವರಿ 2011, 9:05 IST

ಮಡಿಕೇರಿ: ಈ ತಿಂಗಳ 22ರಂದು ನಡೆಯಲಿರುವ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಅಲ್ಲದೆ, ಚುನಾವಣೆ ಸಮಯದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ನಗರಸಭೆ ಚುನಾವಣಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಸೆಂಬರ್ 22ರ ಸಭೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿತ್ತು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಮಗೇ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ. 22ರಂದು ನಿಷೇಧಾಜ್ಞೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಜ. 22ರಂದು ಬೆಳಿಗ್ಗೆ 11 ಗಂಟೆಗೆ ನಗರಸಭಾ ಸದಸ್ಯರ ವಿಶೇಷ ಸಭೆಯನ್ನು ನಗರಸಭಾ ಕೌನ್ಸಿಲ್ ಹಾಲ್‌ನಲ್ಲಿ ಕರೆಯಲಾಗಿದೆ. ಎಲ್ಲಾ ಸದಸ್ಯರು, ಮಡಿಕೇರಿ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರು ಸಭೆಗೆ ಸಕಾಲಕ್ಕೆ ಆಗಮಿಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ಅಂದು ಬೆಳಿಗ್ಗೆ 9ರಿಂದ 11 ಗಂಟೆವರೆಗೆ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸ್ವೀಕರಿಸಲಾಗುವುದು. 11ರಿಂದ 11.15ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 11.15ರಿಂದ 11.30ರವರೆಗೆ ನಾಮಪತ್ರ ವಾಪಸು ಪಡೆಯಲು ಅವಕಾಶವಿದೆ. ಅವಶ್ಯವಿದ್ದಲ್ಲಿ 11.30ಕ್ಕೆ ಚುನಾವಣೆ ನಡೆಸಲಾಗುವುದು. ಸದಸ್ಯರು ಕೈ ಎತ್ತಿ ಮತ ಚಲಾಯಿಸುವುದರ ಮೂಲಕ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಮಾಡಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದರು.

ಡಿ. 22ರಂದು ಮುಂದೂಡಲ್ಪಟ್ಟಿದ್ದ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯ ಸಭೆಯನ್ನು ಜ. 10ರಂದು ಬರ್ಖಾಸ್ತುಗೊಳಿಸಲಾಗಿತ್ತು. ಹೊಸ ವೇಳಾ ಪಟ್ಟಿಯಂತೆ ಜ. 22ರಂದು ಚುನಾವಣೆ ನಡೆಯಲಿದೆ. ಜ. 10ರಂದು ಕೂಡ ನಗರಸಭೆ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಮಧ್ಯೆ, ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ಎಚ್.ಎಂ. ನಂದಕುಮಾರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜನತಾದಳ (ಎಸ್)ನ ಅಶ್ರಫ್ ಕೂಡ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇದೇ ಪಕ್ಷದ ಅಶ್ರಫುನ್ನೀಸಾ ಕೂಡ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಕೆ.ಜಿ. ಹರೀಶ್ ಮೊದಲೇ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತ ಹಿಡಿಯುವ ಆಸೆ ಕೈಬಿಟ್ಟಿದೆ.

ಬಿಜೆಪಿ ಮೂಲಗಳ ಪ್ರಕಾರ, ಹೊಸದಾಗಿ ಬಿಜೆಪಿ ಸೇರಿರುವ ಎಚ್.ಎಂ. ನಂದಕುಮಾರ್ ಅವರೇ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ನಂದಕುಮಾರ್ ಅಧ್ಯಕ್ಷರಾಗುವುದಕ್ಕೆ ಬಿಜೆಪಿ ಸದಸ್ಯರೇ ವಿರೋಧ ವ್ಯಕ್ತಪಡಿಸುತ್ತಿದ್ದರೂ ವರಿಷ್ಠರು ಅವರನ್ನು ಬಾಯಿ ಮುಚ್ಚಿಸಲಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ವಿಜಯಕುಮಾರ್ ಈ ಮೊದಲು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದರು. ಆದರೆ, ಆನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ನಂದಕುಮಾರ್ ಅವರಿಗೆ ಸ್ಥಾನ ಬಿಟ್ಟು ಕೊಡುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.