ADVERTISEMENT

ಕಾಫಿ ತೋಟಕ್ಕೆ ಕಾಡಾನೆ ದಾಳಿ: ನಷ್ಟ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 9:15 IST
Last Updated 5 ಮಾರ್ಚ್ 2011, 9:15 IST

ವಿರಾಜಪೇಟೆ: ವಿರಾಜಪೇಟೆಯಿಂದ ಸುಮಾರು 8 ಕಿ.ಮೀ ದೂರದ ಪಾಲಂಗಾಲ ಗ್ರಾಮದ ಕಾಫಿ ತೋಟದಲ್ಲಿ ಎಂಟು ಕಾಡಾನೆಗಳು ಬೀಡುಬಿಟ್ಟಿದ್ದು, ಸುಮಾರು ರೂ. ಮೂರು ಲಕ್ಷದ ಮೌಲ್ಯದ ಗಿಡಗಳು ನಾಶವಾಗಿವೆ ಎಂದು ತೋಟದ ಮಾಲೀಕ ಕೆ.ಪಿ.ಮುತ್ತಣ್ಣ ಶುಕ್ರವಾರ ವಿಭಾಗ ಅರಣ್ಯ ಅಧಿಕಾರಿಗೆ ದೂರು ನೀಡಿದ್ದಾರೆ.

ಬುಧವಾರ ರಾತ್ರಿಯಿಂದಲೇ ಸಮೀಪದ ಅಭಯಾರಣ್ಯದಿಂದ ಬಂದ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿಯೇ ತಂಗಿದ್ದು ಈ ದಾಂಧಲೆ ನಡೆಸಿದೆ. ತೋಟದಲ್ಲಿ ಫಸಲಿನ ಸುಮಾರು 500 ಕಾಫಿ ಗಿಡಗಳು, 14 ತೆಂಗಿನ ಮರಗಳು, 22 ಸಿಲ್ವರ್ ಮರಗಳು, 20 ಬಾಳೆ ಗಿಡಗಳನ್ನು ಬುಡ ಸಮೇತ ಕಿತ್ತು ನಾಶ ಪಡಿಸಿದೆ. ರಾತ್ರಿ ವೇಳೆಯಲ್ಲಿ ಮಾತ್ರ ಕಾಡಾನೆಗಳ ಹಿಂಡು ತೋಟದಲ್ಲಿ ದಾಂಧಲೆ ನಡೆಸುತ್ತಿದ್ದು ಹಗಲು ವೇಳೆಯಲ್ಲಿ ಯಾರಿಗೂ ಕಾಣಿಸಿಕೊಳ್ಳುತ್ತಿಲ್ಲ, ಪಾಲಂಗಾಲ ಗ್ರಾಮಸ್ಥರು ಇದರಿಂದ ಭಯ ಭೀತರಾಗಿದ್ದಾರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯ ಕೈಗೊಳ್ಳದಿದ್ದರೆ ಸುತ್ತಲಿನ ತೋಟದ ಗಿಡಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾಕುಟ್ಟದ ಅಭಯಾರಣ್ಯ ಪಾಲಂಗಾಲ ಗ್ರಾಮಕ್ಕೆ ಒತ್ತಾಗಿರುವುದರಿಂದ ಕಾಡಾನೆಗಳು ಕುಡಿಯುವ ನೀರು ಹಾಗೂ ಆಹಾರವನ್ನು ಹುಡುಕಿಕೊಂಡು ಗ್ರಾಮಕ್ಕೆ ಬರುತ್ತಿವೆ. ಮಂಗಳವಾರ ರಾತ್ರಿಯೂ ಪಾಲಂಗಾಲದಲ್ಲಿ ಕಾಡಾನೆಗಳ ಹಿಂಡು ಪಕ್ಕದ ತೋಟದ ಗಿಡಗಳನ್ನು ನಾಶ ಮಾಡಿರುವುದು ತಡವಾಗಿ ಗೊತ್ತಾಗಿದೆ ಎಂದು ಮುತ್ತಣ್ಣ ತಿಳಿಸಿದರು.

ಪ್ರತಿಭಟನೆಗೆ ಸಿದ್ಧತೆ: ಅರಣ್ಯ ಇಲಾಖೆ ಅಧಿಕಾರಿಗಳು ತುರ್ತಾಗಿ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯ ಕೈಗೊಳ್ಳದಿದ್ದರೆ ಇನ್ನು ಎರಡು ದಿನಗಳ ಅವಧಿಯಲ್ಲಿ ವಿರಾಜಪೇಟೆ ವಿಭಾಗ ಅರಣ್ಯ ಕಚೇರಿ ಮುಂದೆ ಪ್ರತಿಭಟನೆ ಹಾಗೂ ಧರಣಿ ಮುಷ್ಕರ ಹೂಡಲು ಗ್ರಾಮಸ್ಥರು ನಿರ್ಧರಿಸಿರುವುದಾಗಿ ಮುತ್ತಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.