ADVERTISEMENT

ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 8:44 IST
Last Updated 27 ನವೆಂಬರ್ 2017, 8:44 IST

ನಾಪೋಕ್ಲು: ಬೇತು, ಬಲಮುರಿ, ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾದ ಮಕ್ಕಿಕಡು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವಾಗಲೇ ವಾಹನಗಳ ಸಂಚಾರ ಆರಂಭವಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಲ್ಲಿನ ಬೇತು ಗ್ರಾಮ ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ನಾಪೋಕ್ಲುವಿನಿಂದ ಬಲಮುರಿ ಗ್ರಾಮಕ್ಕೆ ತೆರಳಲು ಜನರು ಸುತ್ತು ಬಳಸಿ ಸಾಗುತ್ತಿದ್ದರು.

₹40 ಲಕ್ಷ ವೆಚ್ಚದ ಯೋಜನೆಯಡಿ ಸೇತುವೆ ನಿರ್ಮಾಣ ಆರಂಭಗೊಂಡು ಮಂಜೂರಾದ ಹಣದಲ್ಲಿ ಹೆಚ್ಚಿನ ಕೆಲಸ ಪೂರ್ಣಗೊಂಡಿದ್ದು, ಇನ್ನೂ ಕೊನೆಯ ಹಂತದ ಕಾಮಗಾರಿ ಬಾಕಿ ಉಳಿದಿದೆ.

ADVERTISEMENT

ನೀರಿನ ಪ್ರವಾಹ ತಡೆಯಲು ಮಕ್ಕಿಕಡು ಸೇತುವೆಯ ಒಂದು ಪಾರ್ಶ್ವದಲ್ಲಿ ನಿರ್ಮಿಸಿರುವ ತಡೆಗೋಡೆ ಪೂರ್ಣಗೊಂಡಿಲ್ಲ. ರಸ್ತೆಯ ಕೊನೆಯಲ್ಲಿ ಮಣ್ಣು ಹಾಕಿ ಎತ್ತರಿಸಬೇಕಾಗಿದೆ.

ಪಾರಾಣೆ–ಬಲಮುರಿ ಸಂಪರ್ಕ ರಸ್ತೆಗೆ ಸೇತುವೆಯಿಂದ ಬೇಲಿ ತೆರವುಗೊಳಿಸಿ ರಸ್ತೆ ಮಾಡಬೇಕಿದೆ. ಆದರೆ ಅದಕ್ಕೂ ಮೊದಲೇ ವಾಹನ ಸವಾರರು ಸೇತುವೆ ಕ್ರಮಿಸಿ ಪಕ್ಕದ ಖಾಸಗಿ ಜಾಗದ ಮೂಲಕ ಹೋಗುತ್ತಿದ್ದಾರೆ. ಭಾನುವಾರ ಜಾಗದ ಮಾಲೀಕರು ಸ್ಥಳಕ್ಕೆ ಬೇಲಿ ನಿರ್ಮಿಸಿ ಸಂಚಾರಕ್ಕೆ ತಡೆಮಾಡಿದ್ದಾರೆ.

ನಾಪೋಕ್ಲುವಿನಿಂದ 3 ಕಿ.ಮೀ. ದೂರದಲ್ಲಿ ಮಕ್ಕಿ ಶಾಸ್ತಾವು ದೇವಾಲ ಯದ ಬಳಿಯಿಂದ ಹಾದುಹೋಗುವ ರಸ್ತೆ ಮಕ್ಕಿಕಡು ಎಂಬಲ್ಲಿ ಕೊನೆಗೊಳ್ಳುತ್ತದೆ. ಅತ್ತ ಪಾರಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಸೇತುವೆ ನಿರ್ಮಾಣಗೊಂಡಲ್ಲಿ 3ಕಿ.ಮೀ. ಕ್ರಮಿಸಿ ಪಾರಾಣೆ ಹಾಗೂ ಬಲಮುರಿ ಗ್ರಾಮಗಳನ್ನು ತಲುಪಬಹುದಾಗಿದೆ.

ವ್ಯಾಪಾರ, ವಹಿವಾಟು ಕಂದಾಯ ಇಲಾಖೆಯ ಕೆಲಸಕಾರ್ಯಗಳಿಗೆ ಗ್ರಾಮೀಣ ಮಂದಿ ಬಲಮುರಿ ಅಥವಾ ಪಾರಾಣೆ ಮೂಲಕ ಸಾಗಿ ನಾಪೋಕ್ಲುಗೆ ಬರಬೇಕಿತ್ತು. ಬಸ್ಸಿನ ಸೌಕರ್ಯವೂ ಕಡಿಮೆ. ಹಾಗೂ ಕ್ರಮಿಸುವ ಅಂತರ ಜಾಸ್ತಿ ಇದ್ದು ಜನ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸೇತುವೆ ನಿರ್ಮಾಣಗೊಂಡಲ್ಲಿ ಎಂಟರಿಂದ ಹತ್ತು ಕಿ.ಮೀ. ಅಂತರ ಕಡಿಮೆಯಾಗಲಿದೆ.

ಗ್ರಾಮದ ಮಕ್ಕಿ ದೇವಾಲಯ ರಸ್ತೆ ಡಾಮರೀಕರಣ ಪುರ್ಣಗೊಳ್ಳುತ್ತಿದ್ದು, ಇದರೊಂದಿಗೆ ಮಕ್ಕಿಕಡು ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥ ಅಪ್ಪನೆರವಂಡ ಕಿರಣ್‌ ಕಾರ್ಯಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.