ADVERTISEMENT

ಕಾಲೇಜಿನ ಸಂಪರ್ಕ ರಸ್ತೆ ಬಂದ್: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:10 IST
Last Updated 3 ಜನವರಿ 2012, 8:10 IST
ಕಾಲೇಜಿನ ಸಂಪರ್ಕ ರಸ್ತೆ ಬಂದ್: ಪ್ರತಿಭಟನೆ
ಕಾಲೇಜಿನ ಸಂಪರ್ಕ ರಸ್ತೆ ಬಂದ್: ಪ್ರತಿಭಟನೆ   

ಶನಿವಾರಸಂತೆ: ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದವರು ಕಬ್ಬಣದ ಗೇಟ್ ನಿರ್ಮಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದರು.

ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಕಬ್ಬಣದ ಗೇಟ್ ಕಿತ್ತ ವಿದ್ಯಾರ್ಥಿಗಳು, ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದರು. ದ್ವಾರವನ್ನು ತೆರವುಗೊಳಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಠಾಣೆಗೆ ದೂರು ಸಲ್ಲಿಸಿದರು.
1996ರಿಂದ ಮುಖ್ಯ ರಸ್ತೆಯಿಂದ ಪ್ರಥಮ ದರ್ಜೆ ಕಾಲೇಜಿಗೆ ಸಾಗಲು ಬಳಸುತ್ತಿದ್ದ ರಸ್ತೆಗೆ ಕಾಲೇಜಿಗೆ ರಜೆ ಇದ್ದ ದಿನ ಗೇಟ್ ನಿರ್ಮಿಸಿರುವುದು ಖಂಡನೀಯ ಎಂದು ವಿದ್ಯಾರ್ಥಿ ಪರಿಷತ್ ಖಂಡಿಸಿದೆ.

ಪ್ರತಿಭಟನೆಯ ನೇತೃತ್ವವನ್ನು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎನ್.ಬಿ.ನಾಗಪ್ಪ, ಉಪಾಧ್ಯಕ್ಷ ಎಚ್.ಪಿ.ಶೇಷಾದ್ರಿ,ಕಾರ್ಯದರ್ಶಿ ಎಸ್.ಪಿ.ರಾಜ, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎಂ.ಪಿ.ಗಣೇಶ್, ಜಗನ್‌ಪಾಲ್, ಎ.ಎಂ.ಆನಂದ್, ಎನ್.ಕೆ.ಅಪ್ಪಸ್ವಾಮಿ ಪ್ರಾಂಶುಪಾಲರಾದ ಉಮಾಶಂಕರ್, ಎಂ.ಆರ್.ನಿರಂಜನ್ ಹಾಗೂ ವಿದ್ಯಾರ್ಥಿ ಪರಿಷತ್‌ನ್ ಪದಾಧಿಕಾರಿಗಳು ವಹಿಸಿದ್ದರು.

ಗೋದಾಮು ರಕ್ಷಣೆಗೆ ದ್ವಾರ ನಿರ್ಮಾಣ: ಸ್ಪಷ್ಟನೆ
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್.ಸಂಗಯ್ಯ ಸ್ಪಷ್ಟನೆ ನೀಡಿದ್ದು, ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷರು ಸಂಘದ ಕಬ್ಬಿಣದ ದ್ವಾರ ತೆರವಿಗೆ ಆಗ್ರಹಿಸಿ ನೀಡಿರುವ ಹೇಳಿಕೆಯನ್ನು ವಿರೋಧಿಸಿದ್ದಾರೆ.

ಸಂಘದ ಜಾಗಗಳ ಹಾಗೂ ಸಂಘದಲ್ಲಿ ಹೊಸದಾಗಿ ಆಳವಡಿಸಿರುವ ಜನರೇಟರ್‌ನ ಸುಭದ್ರತೆಯನ್ನು ಕಾಪಾಡಲು ದ್ವಾರ ನಿರ್ಮಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಇದಲ್ಲದೇ, ಸುತ್ತವಿರುವ ಗೋದಾಮುಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ಹಾಗೂ ಪಡಿತರ ಆಹಾರ ಪದಾರ್ಥಗಳು ಇದ್ದು ರಾತ್ರಿ ವೇಳೆ ಸಣ್ಣಪುಟ್ಟ ಕಳ್ಳತನ ನಡೆಯುತ್ತಿರುತ್ತದೆ. ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ವದಂತಿಯೂ ಇದೆ. ಈ ಎಲ್ಲಾ ಕಾರಣಗಳಿಂದ ಆಡಳಿತ ಮಂಡಳಿ ಸಭೆ ನಿರ್ಣಯದಂತೆ ಸಂಘದ ಆಸ್ತಿ ಸುಭದ್ರತೆಗಾಗಿ ದ್ವಾರ ನಿರ್ಮಿಸಿಕೊಳ್ಳಲಾಗಿದೆ. ರೆವಿನ್ಯೂ ಭೂ ನಕಾಶೆ ಪ್ರಕಾರ ಭಾರತಿ ವಿದ್ಯಾಸಂಸ್ಥೆ ಪ್ರಾಂಶುಪಾಲರ ನಿವಾಸಕ್ಕೆ ಹಾಗೂ ಭಾರತಿ ವಿದ್ಯಾಸಂಸ್ಥೆಗೆ ಅವರವರ ಹಕ್ಕಿಗೆ ಪ್ಲಾನ್‌ನಲ್ಲಿ ಅಧಿಕೃತ ರಸ್ತೆ ಇದ್ದು, ಪ್ಲಾನ್ ರಸ್ತೆಗೆ ಸೀಮಿತವಾಗಿ ಅಧಿಕಾರ ಚಲಾಯಿಸಿಕೊಳ್ಳಲಿ. ವಿದ್ಯಾರ್ಥಿಗಳಿಗೆ ತಿರುಗಾಡಲು ಯಾವಾಗಲೂ ವಿರೋಧಿಸಿರುವುದಿಲ್ಲ ಎಂದಿದ್ದಾರೆ.

ಸಂಘದ ಸುಭದ್ರತೆಗಾಗಿ ಕಾನೂನು ಬದ್ಧವಾಗಿ ಅಕ್ಕಪಕ್ಕದ ಎಲ್ಲಾ ಜಮೀನು ಹಕ್ಕುದಾರರಿಗೆ ನೋಟಿಸ್ ಜಾರಿ ಮಾಡಿ ಎ.ಡಿ.ಎಲ್.ಆರ್.ಸರ್ವೆ ಮಾಡಿಸಿದ್ದು, ಹದ್ದು ಬಸ್ತಿನಂತೆ ಸಂಘದ ಸುಭದ್ರತೆಗಾಗಿ ದ್ವಾರ ನಿರ್ಮಿಸಿಕೊಂಡಿರುತ್ತೇವೆ ಎಂದು ಅಧ್ಯಕ್ಷರು ಹೇಳಿಕೆಯಲ್ಲಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.