ADVERTISEMENT

ಕಾಳ್ಗಿಚ್ಚಿನ ನಂತರ ವನ್ಯಜೀವಿ ದಾಳಿ: ಆತಂಕ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:50 IST
Last Updated 17 ಮಾರ್ಚ್ 2012, 9:50 IST

ಗೋಣಿಕೊಪ್ಪಲು: ಕಾಳ್ಗಿಚ್ಚಿನ ಭಯದಿಂದ ಹೊರಬಂದ ಅರಣ್ಯದ ಅಂಚಿನ ಜನ ಈಗ ವನ್ಯ ಜೀವಿಗಳ ದಾಳಿಯ ಭೀತಿಗೊಳಗಾಗಿದ್ದಾರೆ.  

ಎರಡು ದಿನಗಳ ಹಿಂದೆ ಸುಳುಗೋಡಿನ ಅಜ್ಜಿಕುಟ್ಟಿರ ಮೊಣ್ಣಪ್ಪ ಅವರ ಗದ್ದೆಯ ಬಯಲಿನಲ್ಲಿ ಮೇಯುತ್ತಿದ್ದ ಹಸುವನ್ನು ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇದೀಗ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.  

ಅಗ್ನಿಗೆ ಆಹುತಿಯಾದ ಬೂದಿ ತುಂಬಿದ ಅರಣ್ಯದೊಳಗೆ ಅಡ್ಡಾಡುವ ಕಾಡಾನೆ, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳೆಲ್ಲ ಈಗ ಆಹಾರ ಹುಡುಕುತ್ತಾ ಕಾಫಿ ತೋಟದತ್ತ ಮುಖ ಮಾಡಿವೆ.

15ದಿನಗಳ ಹಿಂದೆ ನಾಲ್ಕೈದು ದಿನಗಳ ಕಾಲ ಹೊತ್ತಿ ಉರಿದ ನಾಗರಹೊಳೆ ಅರಣ್ಯ ಈಗ ಬೂದಿ ತುಂಬಿದ ಬೆಂಗಾಡಾಗಿದೆ. ವನ್ಯಜೀವಿಗಳು ನಡೆದಾಡುವಾಗ ಅವುಗಳೂ ಕಾಣದಷ್ಟು ಎತ್ತರಕ್ಕೆ  ಬೂದಿ ಹಾರುತ್ತಿದೆ. ಕೆಲವು ಕಡೆ ಹಸಿರನ್ನೇ ಕಾಣದ ಸಸ್ಯಹಾರಿ ವನ್ಯ ಜೀವಿಗಳು ನಾಡಿನತ್ತ ಧಾವಿಸುತ್ತಿವೆ.

ನಾಗರಹೊಳೆ ಅರಣ್ಯದ ಅಂಚಿನ ಸುಳುಗೋಡು, ರಾಜಾಪುರ, ತಿತಿಮತಿ ಮುಂತಾದ ಕಡೆ ಆನೆಗಳು ಹಗಲಿನ ವೇಳೆಯಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿವೆ. ಜಾನುವಾರುಗಳ ರೀತಿಯಲ್ಲಿ ತೋಟಕ್ಕೆ ನುಗ್ಗಿ ಕಾಫಿ ಬೀಜ ತಿನ್ನುತ್ತಿವೆ. ಮೂರು ದಿನಗಳ ಹಿಂದೆ ಸುಳುಗೋಡಿನ ಕಾಫಿ ಬೆಳೆಗಾರರೊಬ್ಬರು ಸ್ವಲ್ಪದರಲ್ಲಿಯೇ ಆನೆ ದಾಳಿಯಿಂದ ಪಾರಾಗಿದ್ದಾರೆ.

ಮತ್ತೊಂದು ಕಡೆ ಚಿರತೆ ಹಗಲಿನ ವೇಳೆಯಲ್ಲಿಯೇ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಣ್ಯದಂಚಿನ ಜನತೆ ಕಾಳ್ಗಿಚ್ಚು ಮತ್ತು ವನ್ಯ ಜೀವಿಗಳ ಕಾಟದಿಂದ ಬೇಸತ್ತು  ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.