ADVERTISEMENT

ಕಾವೇರಿ ತಾಲ್ಲೂಕು ರಚನೆ: ಮುಂದುವರಿದ ಧರಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 7:12 IST
Last Updated 17 ಅಕ್ಟೋಬರ್ 2017, 7:12 IST

ಕುಶಾಲನಗರ: ಕುಶಾಲನಗರ ಕೇಂದ್ರವಾಗಿರಿಸಿ ಕಾವೇರಿ ತಾಲೂಕು ರಚನೆಗೆ ಆಗ್ರಹಪಡಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನದಲ್ಲಿ ಮುಂದುವರಿದಿದೆ.
ಸೋಮವಾರ ಸ್ಥಳೀಯ ವಿವಿಧ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಸಿಬ್ಬಂದಿ ಕಾರು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.

ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ, ಕಾರು ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಂಘ, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ, ಶಾರದ ಮಹಿಳಾ ಸಹಕಾರ ಸಂಘ, ಎಪಿಸಿಎಂಎಸ್, ಎಪಿಎಂಸಿ, ವಿಎಸ್ಎಸ್ಎನ್ ಸೇರಿ ಪಟ್ಟಣ ವ್ಯಾಪ್ತಿಯ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದ ಪ್ರತಿಭಟನಾಕಾರರು ಬೆಳಗ್ಗೆ, ಸಂಜೆ ಮೈಸೂರು, -ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿದರು. ಈ ವೇಳೆ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ADVERTISEMENT

ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರು, ‘ಎಲ್ಲ ಅರ್ಹತೆ ಹೊಂದಿದ್ದರೂ ತಾಲೂಕುಗಳ ಪಟ್ಟಿಯಲ್ಲಿ ಕುಶಾಲನಗರ ವಂಚಿತವಾಗುತ್ತಿದೆ. ಸಾರ್ವಜನಿಕರಲ್ಲಿ ಸಹಜವಾಗಿ ಅಸಮಾಧಾನ ಕಾಣಿಸಿಕೊಂಡಿದೆ. ಅ. 30ರಂದು ಜಾಥಾ ನಡೆಯಲಿದೆ ಎಂದರು.

’ಜಾಥಾ ಯಾರ ವಿರುದ್ಧವೂ ಅಲ್ಲ. ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಮುಂದಿಡುವ ಯತ್ನ ಮಾತ್ರ. ಈ ಬಗ್ಗೆ ಜಾಗೃತಿ ಮೂಡಿಸಲು ಭಾನುವಾರದಿಂದಲೇ ಸರದಿ ಸತ್ಯಾಗ್ರಹ ಆರಂಭವಾಗಿದೆ’ ಎಂದು ಹೇಳಿದರು.

‘ಅ. 29ರ ತನಕ ಇದು ಮುಂದುವರಿಯಲಿದೆ. ದಿನಕ್ಕೆ ಒಂದು ಸಂಘಟನೆಯಂತೆ ಪ್ರತಿಭಟನೆ ನಡೆಸಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿವೆ. ಎಲ್ಲಾ ಸಮುದಾಯದ ಧ್ವನಿ ಈ ಪ್ರತಿಭಟನೆ ಮೂಲಕ ಹೊರಹೊಮ್ಮಲಿದೆ’ ಎಂದರು.

ಪ್ರಮುಖರಾದ ಜಿ.ಎಲ್. ನಾಗರಾಜ್, ಟಿ.ಆರ್. ಶರವಣಕುಮಾರ್, ಕೆ.ಎಸ್. ರಾಜಶೇಖರ್, ಕೆ.ಎನ್. ಅಶೋಕ್, ಖಾದರ್, ಎಂ.ವಿ. ನಾರಾಯಣ, ಎನ್.ಕೆ. ಮೋಹನ್ ಕುಮಾರ್, ಕುಮಾರಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಇಲ್ಲಿನ ಕಾವೇರಿ ಛಾಯಾಗ್ರಾಹಕರ ಸಂಘ ಪ್ರತಿಭಟನೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.