ADVERTISEMENT

ಕುಶಾಲನಗರ: ರಸ್ತೆ ವಿಸ್ತರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:08 IST
Last Updated 21 ಡಿಸೆಂಬರ್ 2012, 8:08 IST

ಕುಶಾಲನಗರ: ಪಟ್ಟಣದಲ್ಲಿ ಮಸೀದಿ ಯಿಂದ ಐಬಿಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡಲು ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಸ್.ಪಿ. ಚರಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕುರಿತು ಸದಸ್ಯರು ಚರ್ಚೆ ನಡೆಸಿದರು. ಐಬಿ ರಸ್ತೆಯು ಕಿರಿದಾಗಿದ್ದು ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಉದ್ದೇಶಿತ ರಸ್ತೆ ಅಗಲೀಕರಣವನ್ನು ನಿಯಮಾನುಸಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಸಭೆಯಲ್ಲಿ ಸದಸ್ಯ ಅಬ್ದುಲ್ ಖಾದರ್ ಮಾತನಾಡಿ, ಮಸೀದಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ.

ಆದ್ದರಿಂದ ರಸ್ತೆಯ ಎರಡು ಬದಿಯಲ್ಲೂ 5 ಮೀಟರ್ ಜಾಗ ಗುರುತಿಸಿ ರಸ್ತೆ ವಿಸ್ತರಣೆಗೆ ಚಾಲನೆ ನೀಡುವಂತೆ ಸಲಹೆ ನೀಡಿದರು.ಈಗಾಗಲೇ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಮುಗಿದು ಉದ್ಘಾಟನೆಯಾಗಿದೆ. ಬಸ್ ನಿಲ್ದಾಣದಲ್ಲಿ  ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಿಸಲು ಕ್ರಮ ಕೈಗೊಂಡು ಖಾಸಗಿ ಬಸ್ಸುಗಳು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯ ತಿಮ್ಮಪ್ಪ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಚರಿತಾ ಅವರು, ರೂ. 20 ಲಕ್ಷ ಅನುದಾನವನ್ನು ಶೌಚಾಲಯ ಹಾಗೂ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಗೊಳಿಸಲಾಗುವುದು ಎಂದು ಭರವಸೆ  ನೀಡಿದರು.

ಮುಂದಿನ ಎರಡು ತಿಂಗಳಿನಲ್ಲಿ ಆಡಳಿತ ಮಂಡಳಿ ಅಧಿಕಾರ ಮುಕ್ತಾಯಗೊಳ್ಳಲಿದೆ. ಅಷ್ಟರಲ್ಲಿ ಹೈಟೆಕ್ ಮಾರುಕಟ್ಟೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸದಸ್ಯ ಪುಂಡಾರೀಕಾಕ್ಷ ಒತ್ತಾಯಿಸಿದರು.

ಮಾರುಕಟ್ಟೆಗೆ ರೂ. 20 ಲಕ್ಷ ವೆಚ್ಚದಲ್ಲಿ ಪ್ಲಾಟ್‌ಫಾರಂ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ ಎಂದು ಮುಖ್ಯಾಧಿಕಾರಿ ಡಿ ಸೋಜ ತಿಳಿಸಿದರು. ಮಾರುಕಟ್ಟೆಯ ಮಾಂಸದ ಮಳಿಗೆಗಳ ಹಿಂಭಾಗದಲ್ಲಿ ಜೆಸಿಬಿಯಿಂದ ನೆಲ ಮಟ್ಟ ಮಾಡಿಸುವುದು ಮತ್ತು ಮಾರುಕಟ್ಟೆ ಸುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದ ಗುತ್ತಿಗೆದಾರರಿಗೆ ಕೆಲಸಕ್ಕಿಂತ ಹೆಚ್ಚಿನ ಬಿಲ್ಲು ಮಾಡಲಾಗಿದೆ ಎಂದು ಸ್ಥಾಯಿ ಸಮಿತಿ ಸದಸ್ಯ ವಿ.ಎನ್. ಮಹೇಶ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

13ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಟೆಂಡರ್ ಆಹ್ವಾನಿಸಿ ಅನುಮೋದಿಸಲು ತೀರ್ಮಾನಿ ಸಲಾಯಿತು. ಮಾರುಕಟ್ಟೆ ಆವರಣದಲ್ಲಿ ಇರುವ ಹಳೇ ಕುರಿ, ಕೋಳಿ, ಮಾಂಸದ ಮಾರಾಟದ ಮಳಿಗೆಗಳನ್ನು ಟೆಂಡರ್ ಕರೆದು ನೆಲಸಮಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ನಿರ್ಣಯ ಕೈಗೊಳ್ಳಲಾಯಿತು.ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎನ್. ಮಹೇಶ್, ಮುಖ್ಯಾಧಿಕಾರಿ ಡಿಸೋಜ, ಸದಸ್ಯರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.