ADVERTISEMENT

ಕೃಷಿಯೇತರ ಚಟುವಟಿಕೆಗೆ ಅನುಮತಿ : ಆದೇಶ ರದ್ದತಿಗೆ ನಾಣಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:35 IST
Last Updated 14 ಅಕ್ಟೋಬರ್ 2011, 5:35 IST

ಮಡಿಕೇರಿ: ಕರ್ನಾಟಕ ಭೂ ಸುಧಾರಣೆ ಕಾಯ್ದೆ 79 (ಎ) ಮತ್ತು 79 (ಬಿ) ಉಲ್ಲಂಘಿಸಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟ ಎಲ್ಲ ಆದೇಶಗಳನ್ನು ಕೂಡಲೇ ರದ್ದುಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.

ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರಿಗೆ ಪತ್ರ ಬರೆದಿರುವ ನಾಣಯ್ಯ ಅವರು, ಕೃಷಿ ಜಮೀನನ್ನು ಪ್ಲಾಂಟೇಶನ್ ಜಮೀನು ಎಂದು ಸುಳ್ಳು ಆರ್.ಟಿ.ಸಿ ಸೃಷ್ಟಿಸಿರುವ ಹಿಂದಿನ ಉಪವಿಭಾಗಾಧಿಕಾರಿ ಹಾಗೂ ಅಂದಿನ ಮೂರು ತಾಲ್ಲೂಕುಗಳ ತಹಶೀಲ್ದಾರ್ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆಯೂ ಅವರು ಕೋರಿದ್ದಾರೆ.

ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸುತ್ತಿರುವುದನ್ನು ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಕೃಷಿ ಭೂಮಿ ಪರಿವರ್ತನೆಯಲ್ಲಿ ಕಂದಾಯ ಇಲಾಖೆಯ  ಕೆಳಹಂತದ ಅಧಿಕಾರಿಗಳು ಸೇರಿದ್ದಾರೆ. ಇದರಲ್ಲಿ ಬಹುದೊಡ್ಡ ಭ್ರಷ್ಟಾಚಾರದ ಜಾಲ ಇದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಮಟ್ಟದಲ್ಲಿ ಈಗಾಗಲೇ ಇಂತಹ ಕಾನೂನು ಬಾಹಿರ ಕ್ರಮಗಳ ವಿರುದ್ಧ ತನಿಖೆಗೆ ಆದೇಶಿಸಿರುವುದರಿಂದ ಈ ಕುರಿತು ವೈಯಕ್ತಿಕವಾಗಿ ಗಮನಹರಿಸಿ ಕಾನೂನು ಬಾಹಿರವಾಗಿ ಖರೀದಿಸಿರುವ ಎಲ್ಲ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂತಹ ಕಾನೂನು ಬಾಹಿರ ಕೃತ್ಯವನ್ನು ತಡೆಯದೇ ಹೋದರೆ ಜಿಲ್ಲೆಯ ಕೃಷಿ ಜಮೀನು ಮತ್ತು ಪ್ಲಾಂಟೇಶನ್ ಜಮೀನುಗಳು ರಿಯಲ್ ಎಸ್ಟೇಟ್ ಮತ್ತು ರೆಸಾರ್ಟ್ ದಂಧೆಗೆ ಒಳಪಡುವ ಆತಂಕವಿದೆ. ಇದಲ್ಲದೇ, ಜಿಲ್ಲೆಯ ಪರಿಸರ, ಭತ್ತ ಬೆಳೆಯುವ ಗದ್ದೆಗಳು ನಾಶವಾಗುತ್ತವೆ. ಅಂತರ್‌ಜಲ ಕ್ಷೀಣಿಸಿ, ಜಿಲ್ಲೆಯು ಬರಗಾಲದ ಅಂಚಿಗೆ ಬರುವ ದಿನಗಳು ದೂರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ನಾನಾ ಭಾಗಗಳಲ್ಲಿ ಭತ್ತವನ್ನು ಬೆಳೆಯುವ ಮಳೆಯಾಧಾರಿತ ಗದ್ದೆ ಪ್ರದೇಶಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನುಬಾಹಿರವಾಗಿ ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆ ಮಾಡುತ್ತಿರುವ ಎಲ್ಲಾ ಪ್ರಕರಣಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.