ADVERTISEMENT

ಕೃಷಿ ಬಜೆಟ್: ಕ್ರಾಂತಿಕಾರಕ ನಿರೀಕ್ಷೆ ಹುಸಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:45 IST
Last Updated 26 ಫೆಬ್ರುವರಿ 2011, 6:45 IST

ಮಡಿಕೇರಿ: ‘ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೇ ಪ್ರಥಮ ಬಾರಿಗೆ ಮಂಡಿಸಿದ ಕೃಷಿ ಬಜೆಟ್ ಜನರ ಕಿವಿಯಲ್ಲಿ ಹೂ ಇಡುವ ಕೇವಲ ಪ್ರಚಾರದ ಬಜೆಟ್. ಇದರಿಂದ ದೇಶದ ಬೆನ್ನೆಲುಬಾಗಿರುವ ಕೃಷಿ ವಲಯ ಕ್ರಾಂತಿಕಾರಕ ಪರಿವರ್ತನೆ ನಿರೀಕ್ಷೆಗಳೇನೂ ಇಲ್ಲ’ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದರು.

ಬಾಲಭವನದಲ್ಲಿ ನಡೆದ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಹಾಗೂ ಸಾಂಸ್ಥಿಕ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರನ್ನು ಮರುಳು ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಅನುದಾನವನ್ನೇನೂ ನೀಡಿಲ್ಲ. ಬದಲಿಗೆ ಈ ಹಿಂದಿನ ಕೆಲವು ಯೋಜನೆಗಳನ್ನೇ ಸೇರಿಸಿ ಘೋಷಣೆ ಮಾಡಲಾಗಿದೆ’ ಎಂದು ದೂರಿದರು.

‘ಬಜೆಟ್ ಬಾಕ್ಸ್ ಅನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಮಂಡಿಸಿದ ಮುಖ್ಯಮಂತ್ರಿಗಳ ಕ್ರಮವನ್ನು ನೋಡಿದರೆ ಬಿಜೆಪಿ ಸರ್ಕಾರದ ಆಡಳಿತ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ರಾಜ್ಯದಲ್ಲಿ ರಾಜ್ಯ ಸರ್ಕಾರ ಇದೆಯೋ ಅಥವಾ ನಾಟಕ ಕಂಪೆನಿ ಇದೆಯೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಎಲ್ಲವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಹಿತಾಸಕ್ತಿಯನ್ನು ಮಣ್ಣುಪಾಲು ಮಾಡಿದೆ’ ಎಂದು ಟೀಕಿಸಿದರು.

‘ದೇಶದ ಬೆನ್ನೆಲುಬಾಗಿರುವ ಕೃಷಿ ವಲಯಕ್ಕೆ ಸರ್ಕಾರ ಕಳೆದ ವರ್ಷ ಎಷ್ಟು ಹಣ ಖರ್ಚು ಮಾಡಿದೆ. ಘೋಷಣೆ ಮಾಡುವುದು ಸುಲಭ. ಕೃಷ್ಣಾ ನದಿ ವಿವಾದ ತೀರ್ಪಿನ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳಿಗೆ ಸುವರ್ಣಾವಕಾಶವಿದೆ. ಕೃಷಿ ಯೋಜನೆಗಳಿಗೆ ಈ ವರ್ಷ ಕೇವಲ 7 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಗೆ ಬಜೆಟ್‌ನ ಶೇ 30ರಷ್ಟು ಮೊತ್ತ ಮೀಸಲಿಟ್ಟಿದ್ದರು. ಸುಮಾರು 80-85 ಸಾವಿರ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಕೃಷಿಗೆ ಶೇ 30ರಷ್ಟು ಅನುದಾನ ಒದಗಿಸಿದ್ದರೂ 20 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕಿತ್ತು. ಕೃಷಿ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಬರೀ ಏಳು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿರುವುದನ್ನು ಗಮನಿಸಿದರೆ ಇದು ಪರಿಣಾಮಕಾರಿ ಬಜೆಟ್ ಅಲ್ಲ ಎಂಬುದು ದೃಢವಾಗುತ್ತದೆ’ ಎಂದರು.

ಧರ್ಮಕ್ಕೆ ಕೆಟ್ಟ ಹೆಸರು ತರಬೇಡಿ: ಮಡಿಕೇರಿಯಲ್ಲಿ ಗುರುವಾರ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ವೇಳೆ ಕೆಲವು ಅಂಗಡಿಗಳಿಗೆ ಕಲ್ಲು ತೂರಿರುವುದನ್ನು ಖಂಡಿಸಿದ ಅವರು, ‘ಹಿಂದೂ ಧರ್ಮದ ಹೆಸರಿನಲ್ಲಿ ನಡೆಸುವ ಸಮಾಜೋತ್ಸವ ವೇಳೆ ಅಂಗಡಿ ಮುಂಗಟ್ಟುಗಳ ಗಾಜು ಒಡೆಯುವ ಮೂಲಕ ಧರ್ಮಕ್ಕೆ ಕೆಟ್ಟ ಹೆಸರು ತರುವುದನ್ನು ಕೈಬಿಡಿ’ ಎಂದು ಒತ್ತಾಯಿಸಿದರು.

‘ಮುಳ್ಳಿಗೆ ಮುಳ್ಳಿನಿಂದಲೇ ಉತ್ತರ ಕೊಡುವುದು ಸರಿಯಲ್ಲ. ಏಟಿಗೆ ಎದಿರೇಟು ಕೊಡುವುದು ಕೂಡ ಉತ್ತರವಲ್ಲ. ಸಮಾಜದಲ್ಲಿ ದ್ವೇಷ ಭಾವನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜವನ್ನು ಒಡೆದು ಆಳುವ ನೀತಿಗೆ ಇನ್ನಾದರೂ ಕೊನೆ ಹಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.