ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಲ್ಲೂ ಕೊಳಚೆ ಪ್ರದೇಶ ಇಲ್ಲವೇ? ಅಥವಾ ಕೊಡಗು ಜಿಲ್ಲೆ ಕೊಳಚೆ ಮುಕ್ತ ಜಿಲ್ಲೆಯೇ? ಹೀಗೊಂದು ಸ್ವಾರಸ್ಯಕರ ಚರ್ಚೆಯು ಇಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ನಗರದ ಕೋಟೆ ವಿಧಾನಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.ವಿವಿಧ ಕಾರ್ಯಕ್ರಮಗಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲವೇಕೆ? ಎಂದು ಜಿ.ಪಂ. ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಪ್ರಶ್ನೆ ಎತ್ತಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಇದಕ್ಕೆ ಪ್ರತಿಕ್ರಿಯಿಸಿ, `ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದ್ದರಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ~ ಎಂದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಕಾವೇರಿ, ಜಿಲ್ಲೆಯ ವಿರಾಜಪೇಟೆ, ಗೋಣಿಕೊಪ್ಪಲು, ಕುಶಾಲನಗರ ಹಾಗೂ ಇತರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶಗಳಿದ್ದು, ಇದರ ಬಗ್ಗೆ ಸರ್ಕಾರದ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು.
ಕೃಷ್ಣಪ್ಪ ಮಾತನಾಡಿ, ಕೊಳಚೆ ಪ್ರದೇಶವನ್ನು ಕೊಳಚೆ ಮಂಡಳಿಯವರೇ ಗುರುತಿಸುತ್ತಾರೆ. ನಂತರ ಇದರ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊಳಚೆ ಪ್ರದೇಶಗಳಿರುವುದನ್ನು ಸರ್ಕಾರದ ಗಮನಕ್ಕೆ ತನ್ನಿ, ಇವುಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷ್ಣಪ್ಪ ಮಾತನಾಡಿ, ಕೊಳಚೆ ಪ್ರದೇಶಗಳ ಬಗ್ಗೆ ತಮ್ಮ ಬಳಿ ಪಟ್ಟಿ ಇದ್ದು, ಇದನ್ನು ಸರ್ಕಾರ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ (ಮೈಸೂರು ವಿಭಾಗ) ಯಾವೊಬ್ಬ ಅಧಿಕಾರಿಯೂ ಸಭೆಯಲ್ಲಿ ಹಾಜರಿರಲಿಲ್ಲ.
ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ಎಸ್.ವೈ. ಬಸವರಾಜಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಟ್ಟ ಕುರುಬರನ್ನು ಎಸ್.ಟಿ.ಗೆ ಸೇರಿಸಿ~
ಜಿಲ್ಲೆಯಲ್ಲಿ ವಾಸವಾಗಿರುವ ಬೆಟ್ಟ ಕುರುಬರನ್ನು ಪರಿಶಿಷ್ಟ ವರ್ಗಕ್ಕೆ (ಎಸ್.ಟಿ) ಸೇರಿಸಲು ಕ್ರಮಕೈಗೊಳ್ಳಿ. ಎಸ್.ಟಿ. ಜನಾಂಗಕ್ಕೆ ದೊರಕುವ ಎಲ್ಲ ಸೌಲಭ್ಯಗಳು ಇವರಿಗೆ ದೊರೆಯಬೇಕು ಎಂದು ಜಿ.ಪಂ.ಉಪಾಧ್ಯಕ್ಷೆ ಎಚ್.ಎಂ.ಕಾವೇರಿ ಒತ್ತಾಯಿಸಿದರು.ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ದೊರೆಯದೆ ಬೆಟ್ಟ ಕುರುಬರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಬೆಟ್ಟ ಕುರುಬರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡುವಂತಾಗಬೇಕು ಎಂದು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜಾತಿ, ಉಪಜಾತಿ, ಒಳ ಪಂಗಡಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲು ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಿದ್ದು, ಈ ಕುರಿತಾದ ಬೇಡಿಕೆಯನ್ನು ಆಯೋಗಕ್ಕೆ ಮನವರಿಕೆ ಮಾಡೋಣ ಎಂದು ಅವರು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್ ಜಿ.ಗೌಡ ಮಾತನಾಡಿ, ಬೆಟ್ಟ ಕುರುಬರನ್ನು ಪರಿಶಿಷ್ಟ ವರ್ಗದಲ್ಲಿ ಸೇರ್ಪಡೆ ಮಾಡಬೇಕೆಂದು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಈಗ ಮತ್ತೊಂದು ಬಾರಿ ಪತ್ರ ಬರೆದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಎಷ್ಟು, ಕುಟುಂಬಗಳ ಸಂಖ್ಯೆ, ಆರ್ಥಿಕ ಸ್ಥಿತಿಗತಿ, ಸರ್ಕಾರದ ಸೌಲಭ್ಯಗಳು ಎಷ್ಟರ ಮಟ್ಟಿಗೆ ತಲುಪುತ್ತಿವೆ ಎಂಬ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಹಮ್ಮಿಕೊಳ್ಳುವಂತೆ ಕೃಷ್ಣಪ್ಪ ಅವರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಸಮಗ್ರ ಗಿರಿಜನ ಅಭಿವದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಶಂಸಾರ್ಹ ಸಾಧನೆ
ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ಸಂಪನ್ಮೂಲ ಇಲಾಖೆಯು ರಾಜ್ಯದಲ್ಲಿ ನಡೆಸಿದ ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡಗು ಜಿಲ್ಲೆಯ ಮೂರೂ ತಾಲ್ಲೂಕುಗಳು (ಬ್ಲಾಕ್) ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎ.ರಾಮಸ್ವಾಮಿ ತಿಳಿಸಿದರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 4 ಗ್ರಾ.ಪಂ.ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ದೊರೆತಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು 60 ಗ್ರಾ.ಪಂ.ಗಳಿಗೆ (98 ಗ್ರಾ.ಪಂ. ಪೈಕಿ) ನಿರ್ಮಲ ಗ್ರಾಮ ಪುರಸ್ಕಾರ ದೊರೆತಂತಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.