ADVERTISEMENT

ಕೊಡಗಿನಲ್ಲೂ ಸವಿರುಚಿ ಕ್ಯಾಂಟೀನ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 6:11 IST
Last Updated 18 ಡಿಸೆಂಬರ್ 2017, 6:11 IST
ಸವಿರುಚಿ ಕ್ಯಾಂಟೀನ್‌ ವಾಹನ
ಸವಿರುಚಿ ಕ್ಯಾಂಟೀನ್‌ ವಾಹನ   

ಮಡಿಕೇರಿ: ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭಕ್ಕೆ ಕೊಡಗು ಜಿಲ್ಲೆಯಲ್ಲಿ ಸಿದ್ಧತೆಗಳು ಆರಂಭಗೊಂಡಿದ್ದು, ಕೆಲವೇ ದಿನಗಳಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಲಭ್ಯವಾಗಲಿದೆ.

ಸ್ತ್ರೀ ಶಕ್ತಿ ಒಕ್ಕೂಟಗಳು ಉತ್ಸಾಹ ತೋರಿದ್ದು, ಶೀಘ್ರದಲ್ಲಿಯೇ ಕ್ಯಾಂಟೀನ್‌ ಕಾರ್ಯಾರಂಭಗೊಳ್ಳುವ ನಿರೀಕ್ಷೆಯಿದೆ. 2017–18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಿರುಚಿ ಸಂಚಾರಿ ಕ್ಯಾಂಟೀನ್‌ ಘೋಷಣೆ ಮಾಡಿದ್ದರು. ಅದರಂತೆ ಈ ತಿಂಗಳಾಂತ್ಯ ಅಥವಾ ಜನವರಿ 15ರ ವೇಳೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಈ ಕ್ಯಾಂಟೀನ್‌ಗೆ ಚಾಲನೆ ಸಿಗಲಿದೆ.

ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ ಒಟ್ಟು ₹10 ಲಕ್ಷ ಸಹಾಯಧನದ ರೂಪದಲ್ಲಿ ಬಡ್ಡಿ ರಹಿತ ಸಾಲವನ್ನು ನೀಡಿ, ಕ್ಯಾಂಟೀನ್‌ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಸ್ತ್ರೀಶಕ್ತಿ ಗುಂಪುಗಳು ಸಾಲವನ್ನು ಪಡೆದು 6 ತಿಂಗಳ ನಂತರ 60 ತಿಂಗಳ ಕಾಲ ಸಾಲ ಮರುಪಾವತಿ ಮಾಡಲು ಅವಕಾಶವಿದೆ.

ADVERTISEMENT

ಕ್ಯಾಂಟೀನ್‌ಗೆ ಅಗತ್ಯವಿರುವ ಮೇಜು, ಕುರ್ಚಿ ಹಾಗೂ ಇತರೆ ಸಾಮಗ್ರಿಗಳನ್ನೂ ಖರೀದಿ ಮಾಡಬಹುದು. ಸಂಘದ ಪದಾಧಿಕಾರಿಗಳೇ ಕ್ಯಾಂಟಿನ್ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮುಮ್ತಾಜ್ ಮಾಹಿತಿ ನೀಡಿದ್ದಾರೆ.

ಕ್ಯಾಂಟೀನ್ ವಿಶೇಷತೆ: ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆ, ವಿಶೇಷ ಸಂದರ್ಭಗಳಲ್ಲಿ ಸಂಚಾರಿ ವಾಹನದ ಮೂಲಕ ಆಯಾಯ ಸ್ಥಳಗಳಿಗೆ ತೆರಳಿ ಕಡಿಮೆ ದರದಲ್ಲಿ, ಗುಣಮಟ್ಟದ ಶುಚಿ-ರುಚಿಯಾದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ತಿಂಡಿ, ಟೀ, ಕಾಫಿ, ಹಣ್ಣಿನ ರಸ ಸೇರಿದಂತೆ ಸ್ಥಳೀಯ ಖಾದ್ಯಗಳನ್ನು ತಯಾರಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಅನುಕೂಲಕರವಾದ ಸ್ಥಳಗಳಲ್ಲಿ ಮಾರಾಟ ಪ್ರಕ್ರಿಯೆ ಸ್ಥಿರಗೊಂಡ ಬಳಿಕ ಸಂಡಿಗೆ, ಉಪ್ಪಿನಕಾಯಿ, ಮಸಾಲೆ ಪುಡಿಗಳನ್ನು ಕೂಡ ಮಾರಾಟ ಮಾಡಲು ಕ್ರಮ ವಹಿಸಲಾಗುವುದು. ಹೋಟೆಲ್‌ಗಳಲ್ಲಿನ ಬೆಲೆಗಿಂತ ಕೊಂಚ ಕಡಿಮೆ ವೆಚ್ಚದಲ್ಲಿ ಆಹಾರ ಸಿಗಲಿದೆ.

ಒಕ್ಕೂಟದ 10 ಮಂದಿಗೆ ಈಗಾಗಲೇ ಮಂಗಳೂರಿನಲ್ಲಿ ಎರಡು ದಿನದ ತರಬೇತಿ ಪಡೆದುಕೊಂಡಿದ್ದಾರೆ. ತರಬೇತಿಯಲ್ಲಿ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಶುಚಿತ್ವ ಕಾಪಾಡುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸ್ತ್ರೀಶಕ್ತಿ ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಯೋಜನೆಯಿಂದ ಮಹಿಳೆಯರು ಸ್ವಾವಲಂಬನೆಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ. ವಾಹನ ಚಾಲನೆಗೂ ಮಹಿಳಾ ಚಾಲಕರನ್ನೇ ನೇಮಿಸಲು ಅವಕಾಶವಿದ್ದು ಮಹಿಳೆಯರು ಸ್ವಾವಲಂಬಿ ಆಗಲಿದ್ದಾರೆ ಎಂದು ಹೇಳುತ್ತಾರೆ ಸ್ತ್ರೀಶಕ್ತಿ ಸಂಘದ ಸದಸ್ಯರು.

* * 

ಕ್ಯಾಂಟೀನ್‌ ಆರಂಭಿಸಲು ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನೂ ನಡೆಸಲಾಗಿದೆ. ಯೋಜನೆಯಿಂದ ಮಹಿಳೆಯರಿಗೆ ಹೆಚ್ಚು ಅನುಕೂಲ
ಮುಮ್ತಾಜ್, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.