ADVERTISEMENT

ಕೊಡಗಿನಾದ್ಯಂತ `ಕೈಲ್' ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:05 IST
Last Updated 4 ಸೆಪ್ಟೆಂಬರ್ 2013, 6:05 IST

ಮಡಿಕೇರಿ: ಕೊಡಗಿನಾದ್ಯಂತ ಮಂಗಳವಾರ ಕೈಲ್ ಮುಹೂರ್ತ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಹಬ್ಬವನ್ನು ಆಯುಧ ಪೂಜಾ ಹಬ್ಬವೆಂದು ಕೂಡ ಕರೆಯಲಾಗುತ್ತದೆ.

ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಈ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಬಂಧುಮಿತ್ರರೊಂದಿಗೆ ಈ ಹಬ್ಬವನ್ನು ಆಚರಿಸುವುದು ವಾಡಿಕೆ.

ವರ್ಷಂಪ್ರತಿ ಈ ಹಬ್ಬವನ್ನು ಸೆಪ್ಟಂಬರ್ ತಿಂಗಳ ಮೊದಲನೆ ವಾರದಲ್ಲಿ ಆಚರಿಸಲಾಗುವುದು. ಕೊಡಗಿನ ಮೂಲ ನಿವಾಸಿಗಳೆಲ್ಲರೂ ಈ ಪದ್ಧತಿಯನ್ನು ರೂಢಿಸಿಕೊಂಡಿದ್ದು, ಕೊಡಗಿನಿಂದ ಹೊರ ಹೋಗಿರುವ ಜನರು ಕೂಡ ಈ ಹಬ್ಬದಂದು ತಮ್ಮ ತಮ್ಮ ಊರುಗಳಿಗೆ ಮರಳಿ ಹಬ್ಬಾಚರಣೆ ಮಾಡುವರು.

ಜಿಲ್ಲೆಯ ಬಹುತೇಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು. ಹಬ್ಬದ ನಿಮಿತ್ತ ಇಲ್ಲಿನ ನಿವಾಸಿಗಳು ಬಳಸುವ ವಸ್ತುಗಳಾದ ಕತ್ತಿ, ಕೋವಿ, ಕೃಷಿ ಉಪಕರಣಗಳನ್ನು ಪೂಜಿಸಿದರು. ಗ್ರಾಮೀಣ ಭಾಗದಲ್ಲಿ ದನಕರುಗಳನ್ನು ತೊಳೆದು ಅವುಗಳನ್ನು ಸಿಂಗರಿಸಿ, ಪೂಜೆ ಮಾಡಿದರು.

ಬಳಿಕ ಇಲ್ಲಿನ ಐನ್ ಮನೆಗಳಿಗೆ ತೆರಳಿ ವಿಶೇಷ ಪೂಜೆ ಸ್ಲ್ಲಲಿಸುವ ಮೂಲಕ ಕೊಡವ ನಾಡಿನ ಸಂಸ್ಕೃತಿಯ ಬಗ್ಗೆ ಹಲವು ಗಣ್ಯರು ವಿಶೇಷ ಮಾಹಿತಿ ನೀಡಿದರು.

ಮೊದಲಿನಿಂದಲ್ಲೂ ಹಬ್ಬದ ನಿಮಿತ್ತ ಪ್ರತಿಯೊಬ್ಬರ ಮನೆಯಲ್ಲೂ ಮಾಂಸ ಖಾದ್ಯಗಳನ್ನು ತಯಾರಿಸಿ ಸವಿಯುವುದು ಹಬ್ಬದ ಮತ್ತೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರತಿಯೊಂದು ಮನೆಗಳಲ್ಲೂ ಹಬ್ಬದ ವಾತಾವರಣ ಕಂಡು ಬಂತು.

ಕೆಲಸದ ನಿಮಿತ್ತ ದೂರದ ಊರಿಗೆ ತೆರಳಿದ ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಸವಿ ಸವಿಯುವ ಜೊತೆಗೆ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸಿದರು. ಮರಕ್ಕೆ ತೆಂಗಿನ ಕಾಯಿ ಕಟ್ಟಿ ಅದನ್ನು ಬಂದೂಕಿನಿಂದ ವಡೆಯುವುದು ಸೇರಿದಂತೆ ಮತ್ತಿತರ ಕ್ರೀಡಾಕೂಟಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.