ADVERTISEMENT

ಕೊಡವರ ಮನೆ ಮಂಗಲ: ಚಿತ್ರೀಕರಣ ಆರಂಭ

​ಪ್ರಜಾವಾಣಿ ವಾರ್ತೆ
Published 14 ಮೇ 2014, 6:32 IST
Last Updated 14 ಮೇ 2014, 6:32 IST
ಕೊಡವ ಸಂಪ್ರದಾಯದಂತೆ ದವಸ ಧಾನ್ಯಗಳನ್ನು ಹೊತ್ತ ಮಹಿಳೆಯರು ಗೃಹ ಪ್ರವೇಶಕ್ಕೆ ಅಣಿಯಾಗಿರುವುದು.
ಕೊಡವ ಸಂಪ್ರದಾಯದಂತೆ ದವಸ ಧಾನ್ಯಗಳನ್ನು ಹೊತ್ತ ಮಹಿಳೆಯರು ಗೃಹ ಪ್ರವೇಶಕ್ಕೆ ಅಣಿಯಾಗಿರುವುದು.   

ಮಡಿಕೇರಿ: ಕೊಡವರ ಗೃಹ ಪ್ರವೇಶದ ಮೂಲ ಪದ್ಧತಿ ಅಳಿವಿನಂಚು ತಲುಪಿದೆ. ಇದನ್ನು  ಉಳಿಸುವ ಉದ್ದೇಶದಿಂದ ಅಲ್ಲಾರಂಡ ರಂಗ ಚಾವಡಿಯ ವತಿಯಿಂದ ಸಾಕ್ಷ್ಯಚಿತ್ರವನ್ನು ನಗರದ ಹೊರವಲಯದಲ್ಲಿ ಮಂಗಳವಾರ ಚಿತ್ರೀಕರಿಸಲಾಯಿತು.

ಅಲ್ಲಾರಂಡ ವಿಠಲ್ ನಂಜಪ್ಪ ಮಾರ್ಗದರ್ಶನಲ್ಲಿ ಚಿತ್ರೀಕರಣ ಸಾಗಿತು. ಅಲ್ಲಾರಂಡ ರಂಗಚಾವಡಿಯಲ್ಲಿ ಸಂಪ್ರದಾಯದಂತೆ ಹಂದಿ ಮತ್ತು ಕೋಳಿಯನ್ನು ಬಲಿ ನೀಡಲಾಯಿತು. ನಂತರ ಇಲ್ಲಿಂದ ನೂತನ ಗೃಹದೆಡೆಗೆ ಜನಾಂಗ ಬಾಂಧವರು ಮೆರವಣಿಗೆಯಲ್ಲಿ ಸಾಗಿದರು.
ಹಸು ಮತ್ತು ಕರುವನ್ನು ಮುಂಚೂಣಿಯಲ್ಲಿರಿಸಿ ‘ಮನೆ ಪಾಟ್’ ಹಾಡನ್ನು ಹೇಳುತ್ತಾ ತೆರಳಿದರು.

ಕೊಡವರು ಸಾಂಪ್ರದಾಯಿಕ ವೇಷಭೂಷಣ ಧಾರಿಯಾಗಿದ್ದರು. ತೊಟ್ಟಿಲಿನಲ್ಲಿ ಮಗು, ಧವಸ ಧಾನ್ಯ, ಕತ್ತಿ, ಕೋವಿ, ಬಾಳೆ ಹಣ್ಣು, ವೀಳ್ಯದೆಲೆ,ತೂಗು ದೀಪ ಇನ್ನಿತರ ಸಂಪ್ರದಾಯಿಕ ವಸ್ತುಗಳನ್ನು ಮಹಿಳೆಯರು ತಲೆಯ ಮೇಲಿರಿಸಿಕೊಂಡು ಹೆಜ್ಜೆ ಹಾಕಿದರು.
ನೂತನ ಮನೆಗೆ ಒಂದು ಸುತ್ತು ಬಂದ ಹಸು ಮತ್ತು ಕರುವನ್ನು ಮೊದಲು ಗೃಹ ಪ್ರವೇಶಿಸಿದವು. ಮೆರವಣಿಗೆಯಲ್ಲಿ ಸಾಗಿ ಬಂದವರು ಅವುಗಳನ್ನು ಹಿಂಬಾಲಿಸಿದರು. ಪ್ರಮುಖರಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ನಡೆದು ಬಂದ ಹಾದಿ: ಕೊಡವರ ಗೃಹ ಪ್ರವೇಶ ಮೂಲದಲ್ಲಿ ಸರಳವಾಗಿತ್ತು. ಮನೆಯ ಹೊರಗೆ ಹಂದಿ ಮತ್ತು ಕೋಳಿ ಬಲಿ ಕೊಡಲಾಗುತ್ತಿತ್ತು. ಮನೆ ಹೊಕ್ಕ ದುಷ್ಟ ಶಕ್ತಿಯು ಹೊರಗೆ ಬಲಿಕೊಡಲಾದ ಪ್ರಾಣಿಯ ರಕ್ತ ಹೀರಲು ಹೊರ ಬರುತ್ತವೆ ಎಂಬ ನಂಬಿಕೆ ಇತ್ತು.
ನಂತರ ಮನೆಗೆ ಮುಂಡರಿಕೆ ಬಳ್ಳಿಯನ್ನು ಮನೆಗೆ ಕಟ್ಟಲಾಗುತ್ತಿತ್ತು. ಈ ಬಳ್ಳಿಯು ಮನೆಯ ಒಳಗೆ ದುಷ್ಟ ಶಕ್ತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ ಎಂದು ನಂಬಿಕೆ ಇತ್ತು ಎಂದು ವಿಠಲ್ ನಂಜಪ್ಪ ಮಾಹಿತಿ ನೀಡಿದರು.

ಕೊಡಗಿನಲ್ಲಿ ಲಿಂಗರಾಜನ ಆಡಳಿತ ಅವಧಿಯಲ್ಲಿ ಕೇರಳದಿಂದ ‘ಮಲೆ ಜನಾಂಗ’ದವರನ್ನು ದೇವಾಲಯ ಪೂಜೆಗೆಂದು ಕರೆಸಲಾಗಿತ್ತು.
ಇದಾದ ನಂತರ ಬ್ರಾಹ್ಮಣರನ್ನು ನೇಮಿಸಲಾಯಿತು.

ಬ್ರಾಹ್ಮಣರ ಆಗಮನದಿಂದ ಕೊಡವರ ಗೃಹ ಪ್ರವೇಶ ಪದ್ಧತಿಯಲ್ಲಿ ಬದಲಾವಣೆಯಾಯಿತು. ಗಣಪತಿ ಹೋಮ ಅಥವಾ ಸತ್ಯನಾರಾಯಣ ಪೂಜೆಯ ಮೂಲಕ  ಗೃಹ ಪ್ರವೇಶ ಮಾಡಲಾಗುತ್ತಿದೆ ಎನ್ನುತ್ತಾರೆ ವಿಠಲ್ ನಂಜಪ್ಪ.

ಕೊಡವರ ಹಳೆಯ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪ್ರಚುರ ಪಡಿಸುವ ದೃಷ್ಟಿಯಿಂದ ಸಾಕ್ಷ್ಯಚಿತ್ರವನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಕ್ಷ್ಯಚಿತ್ರ ಶೀಘ್ರದಲ್ಲೇ ಬಿಡುಗಡೆ
ಮಡಿಕೇರಿ: ಕೊಡವ ಸಂಪ್ರದಾಯದ ಪ್ರಕಾರ ನಡೆಯುವ ‘ಮನೆ ಮಂಗಲ’ ಕುರಿತಾದ  ಸಾಕ್ಷ್ಯಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದಾಗಿ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.

ವಿಷ್ಣು, ಅರುಣ್ ಮತ್ತು ನರೇಶ್ ಕ್ಯಾಮರಾ ಮೆನ್‌ಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಶೇ. 2 ರಷ್ಟು ಮಾತ್ರ ಸಂಭಾಷಣೆಯನ್ನು ಬಳಸಲಾಗಿದೆ. ಉಳಿದಂತೆ ಕೊಡವ ಜಾನಪದ ಹಾಡು ಮತ್ತು ವಾದ್ಯವನ್ನು ಉಪಯೋಗಿಸಲಾಗುತ್ತದೆ. ಮುಂದಿನ ವರ್ಷ ತ್ರಿಭಾಷಾ ಕವಿ ಐಮಾ ಮುತ್ತಣ್ಣ ಅವರ ಜೀವನ ಚರಿತ್ರೆ ಆಧಾರಿತ ಸಾಕ್ಷ್ಯಚಿತ್ರ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT