ADVERTISEMENT

ಕ್ರಿಕೆಟ್‌ ಟೂರ್ನಿ; ಕೈಕೇರಿ ತಂಡಕ್ಕೆ ಪ್ರಶಸ್ತಿ

ಸವಿತಾ ಸಮಾಜದ 2ನೇ ವರ್ಷದ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 8:42 IST
Last Updated 20 ಏಪ್ರಿಲ್ 2018, 8:42 IST
ವಿರಾಜಪೇಟೆಯಲ್ಲಿ ಈಚೆಗೆ ನಡೆದ ಸವಿತಾ ಸಮಾಜದ ಜಿಲ್ಲಾ ಮಟ್ಟದ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಪಡೆದುಕೊಂಡ ಕೈಕೇರಿ ತಂಡ
ವಿರಾಜಪೇಟೆಯಲ್ಲಿ ಈಚೆಗೆ ನಡೆದ ಸವಿತಾ ಸಮಾಜದ ಜಿಲ್ಲಾ ಮಟ್ಟದ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಪಡೆದುಕೊಂಡ ಕೈಕೇರಿ ತಂಡ   

ವಿರಾಜಪೇಟೆ: ಪಟ್ಟಣದ ಕಾವೇರಿ ಕಾಲೇಜಿನಲ್ಲಿ ಈಚೆಗೆ ನಡೆದ ಸವಿತಾ ಸಮಾಜದ ಎರಡನೇ ವರ್ಷದ ಕ್ರಿಕೆಟ್‌ ಟೂರ್ನಿಯಲ್ಲಿ ಕೈಕೇರಿ ತಂಡ ಪ್ರಶಸ್ತಿ ಪಡೆದುಕೊಂಡಿತು.

ಸವಿತಾ ಸಮಾಜದ ತಾಲ್ಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯಿಂದ ನಡೆದ ಜಿಲ್ಲಾಮಟ್ಟದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೈಕೇರಿ ತಂಡವು 25 ರನ್‌ಗಳ ಅಂತರದಿಂದ ಶನಿವಾರಸಂತೆ ತಂಡವನ್ನು ಮಣಿಸಿತು.

ಅಂತಿಮ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೈಕೇರಿ ತಂಡದ ಪೊನ್ನಣ್ಣ ಪಡೆದುಕೊಂಡರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೈಕೇರಿ ತಂಡದ ರೋಶನ್, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಶನಿವಾರಸಂತೆ ತಂಡದ ಅಪ್ಪು ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಈಚೂರು ತಂಡದ ಸಂಕೇತ್ ಪಡೆದುಕೊಂಡರು.

ADVERTISEMENT

ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲೂ ಕೈಕೇರಿಯ ಸವಿತಾ ಸಮಾಜ ತಂಡ ಪ್ರಶಸ್ತಿ ಪಡೆದುಕೊಂಡಿತ್ತು. ಮಹಿಳೆಯರಿಗೆ ನಡೆದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮಡಿಕೇರಿಯ ಯಜ್ಞ ಪ್ರಥಮ ಬಹುಮಾನ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಕೈಕೇರಿ ಸವಿತಾ ಸಮಾಜದ ಅಧ್ಯಕ್ಷ ವಿ.ಬಿ.ಕಿರಣ್, ಕೆಪಿಟಿಸಿಎಲ್‌ನ ನಿವೃತ್ತ ನೌಕರ ಬಿ.ಪಿ.ಸುಂದರ, ಸರ್ಕಾರಿ ನಿವೃತ್ತ ನೌಕರ ಕೃಷ್ಣರಾಜು, ಮಾಜಿ ಯೋಧರಾದ ಗೋಣಿಕೊಪ್ಪಲಿನ ಬಿದ್ದಪ್ಪ, ಇರ್ಪುವಿನ ಜಗನ್ನಾಥ್ ಹಾಗೂ ಶಿವಾಜಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಶಶಿ ಸುಬ್ರಮಣಿ ಹಾಗೂ ಕಗ್ಗೋಡ್ಲುವಿನ ಹೊನ್ನದ ರಾಕೇಶ್ ಬಹುಮಾನ ವಿತರಿಸಿದರು. ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ವೆಂಕಟೇಶ್, ಸವಿತಾ ಸಮಾಜ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ತಾಲ್ಲೂಕು ಅಧ್ಯಕ್ಷ ಕೆ.ಟಿ. ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.