ADVERTISEMENT

ಗರಿಗೆದರಿದ ಸನ್ನಿಸೈಡ್‌ ಮ್ಯೂಸಿಯಂ ಕನಸು

ಮುಂದಿನ ಜನ್ಮ ದಿನಾಚರಣೆಯ ವೇಳೆಗೆ ಲೋಕಾರ್ಪಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 12:21 IST
Last Updated 2 ಏಪ್ರಿಲ್ 2018, 12:21 IST
ಮಡಿಕೇರಿಯ ಸನ್ನಿಸೈಡ್‌ನಲ್ಲಿರುವ ಯುದ್ಧ ಸ್ಮಾರಕ
ಮಡಿಕೇರಿಯ ಸನ್ನಿಸೈಡ್‌ನಲ್ಲಿರುವ ಯುದ್ಧ ಸ್ಮಾರಕ   

ಮಡಿಕೇರಿ: ಸನ್ನಿಸೈಡ್‌ ಆವರಣದಲ್ಲಿ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿದ ಬೆನ್ನಲ್ಲೇ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ನಿವಾಸದ ಮ್ಯೂಸಿಯಂನ ಕನಸು ಗರಿಗೆದರಿದೆ. 1947ರ ನಂತರ ವೀರ ಮರಣ ಹೊಂದಿದ ಯೋಧರ ಸ್ಮರಣೆಗೆ ಇದೇ ಆವರಣದಲ್ಲಿ ಸ್ಮಾರಕ ಲೋಕಾರ್ಪಣೆ ಆಗಿದೆ.ಅನುದಾನದ ಕೊರತೆಯಿಂದ ವಿಳಂಬವಾಗಿದ್ದ ಮ್ಯೂಸಿಯಂ ಕಾಮಗಾರಿಯೂ ಈಗ ವೇಗ ಪಡೆದುಕೊಂಡಿದ್ದು, ತಿಮ್ಮಯ್ಯ ಅವರ ಮುಂದಿನ ಜನ್ಮ ದಿನಾಚರಣೆ ವೇಳೆಗೆ ಮ್ಯೂಸಿಯಂ ಸಹ ಲೋಕಾರ್ಪಣೆ ಆಗುವ ಸಾಧ್ಯತೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ ಸನ್ನಿಸೈಡ್‌ ಸೇರಿರುವ ಯುದ್ಧ ಟ್ಯಾಂಕ್‌ ಸಹ ತಿಮ್ಮಯ್ಯ ಅವರ 112ನೇ ಜನ್ಮ ದಿನಾಚರಣೆ ವೇಳೆ ಬಣ್ಣ ಬಳಿದುಕೊಂಡು ನಿಂತಿದೆ. ಸನ್ನಿಸೈಡ್‌ ನಿವಾಸದಲ್ಲಿ ಮರಗೆಲಸ ಶೇ 90ರಷ್ಟು ಪೂರ್ಣಗೊಂಡಿದೆ. ಹಳೆಯ ಎಲ್ಲ ಕಿಟಕಿ, ಬಾಗಿಲು ತೆರವು ಮಾಡಲಾಗಿದೆ. ಹೊಸದಾಗಿ ಹೆಂಚುಗಳನ್ನು ಹಾಕಲಾಗಿದ್ದು ಆಕರ್ಷಣೀಯ ತಾಣ ಮಾಡುವ ಪ್ರಯತ್ನಗಳು ಸಾಗಿವೆ.ತಿಮ್ಮಯ್ಯ ಅವರು ಭಾರತೀಯ ಸೇನೆ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುವಾಗ ಮಾಡಿದ ಸಾಧನೆಗಳ ಅನಾವರಣ ಮಾಡುವ ಪ್ರಯತ್ನ ನಡೆಯುತ್ತಿದೆ. ರಣಾಂಗಣದಲ್ಲಿ ಮೆರೆದ ಶೌರ್ಯಗಳನ್ನು ಚಿತ್ರಿಸುವ ಪ್ರಯತ್ನ ಸಾಗಿದೆ. ಕಲಾವಿದ ರತ್ನಾಕರನ್ ನೇತೃತ್ವದಲ್ಲಿ ನಾಲ್ವರ ತಂಡವು ಕಲಾಕೃತಿ ರಚಿಸುತ್ತಿದೆ.

ಮ್ಯೂಸಿಯಂ ಉದ್ಘಾಟನೆಯಾದರೆ ತಿಮ್ಮಯ್ಯ ಅವರು ಉಪಯೋಗಿಸಿದ ಪರಿಕರಗಳು, ಸೇನಾ ಸಮವಸ್ತ್ರ, ಸಶಾಸ್ತ್ರಗಳು, ಅವರ ಕುರಿತು ಪುಸ್ತಕ, ಭೂಸೇನೆ, ವಾಯುಸೇನೆ, ನೌಕಾಸೇನೆಯ ಮಾಹಿತಿಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಅಷ್ಟು ಮಾತ್ರವಲ್ಲದೇ ಯುದ್ಧ ವಿಮಾನವೊಂದನ್ನು ತರುವ ಪ್ರಯತ್ನವೂ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಕೇಂದ್ರಕ್ಕೆ ಪತ್ರವನ್ನೂ ಬರೆಯಲಾಗಿದೆ.

ADVERTISEMENT

ನಿವಾಸದ ಮೂಲ ಸ್ವರೂಪ ಉಳಿಸಿಕೊಳ್ಳುವ ಪ್ರಯತ್ನವೂ ಸಾಗುತ್ತಿದೆ. ಜತೆಗೆ, ಪ್ರಾದೇಶಿಕ ಸಾರಿಗೆ ಇಲಾಖೆ ವಶದಲ್ಲಿದ್ದ ಎರಡು ಎಕರೆ ಜಮೀನು ವಶಕ್ಕೆ ಪಡೆಯಲಾಗಿದೆ. ಈ ಜಾಗದಲ್ಲಿ ಉದ್ಯಾನ, ವಾಹನ ನಿಲುಗಡೆ, ತಿಮ್ಮಯ್ಯ ಅವರ ಪುತ್ಥಳಿ ನಿರ್ಮಿಸುವ ಚಿಂತನೆಯಿದೆ ಎಂದು ಜನರಲ್‌ ಕೆ.ಎಸ್‌. ತಿಮ್ಮಯ್ಯ
ಫೋರಂ ಪದಾಧಿಕಾರಿಗಳು ತಿಳಿಸುತ್ತಾರೆ.

ವಿಕಾಸ್‌ ಬಿ. ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.