ADVERTISEMENT

ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

ಸೇತುವೆಗೆ ತೋಡಿದ್ದ ಗುಂಡಿಗೆ ಬಿದ್ದು ಸ್ಕೂಟರ್ ಚಾಲಕನ ದುರ್ಮರಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 15:11 IST
Last Updated 7 ಏಪ್ರಿಲ್ 2019, 15:11 IST
ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ
ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ   

ವಿರಾಜಪೇಟೆ: ಸೇತುವೆ ನಿರ್ಮಿಸಲು ತೋಡಿದ್ದ ಗುಂಡಿಗೆ ಬಿದ್ದ ಸ್ಕೂಟರ್‌ ಸವಾರ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಇಲ್ಲಿ ನಡೆದಿದೆ. ಮೃತನನ್ನು ವಿನೋದಕುಮಾರ್ (30) ಎಂದು ಗುರುತಿಸಲಾಗಿದೆ.

ಇಲ್ಲಿಯ ಮಹಿಳಾ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳುವಾಗ ಶನಿವಾರ ರಾತ್ರಿ 1 ಗಂಟೆಗೆ ಅವಘಡ ಸಂಭವಿಸಿದೆ. ನಗರ ಠಾಣೆಯ ಪೊಲೀಸರು ಸೇತುವೆಯ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೊಡಗು ಕೇರಳ ಗಡಿಭಾಗವಾದ ರಾಜ್ಯ ಹೆದ್ದಾರಿಯ ಆರ್ಜಿ ಗ್ರಾಮದ ಅನ್ವರುಲ್ ಹುದಾ ವಿದ್ಯಾಸಂಸ್ಥೆಯ ಬಳಿಯಲ್ಲಿ ಸೇತುವೆ ನಿರ್ಮಿಸಲಾಗುತ್ತಿದ್ದು, 15–20 ಅಡಿ ಅಳದ ಗುಂಡಿ ತೆಗೆಯಲಾಗಿತ್ತು. ಇಲ್ಲಿಗೆ ರಾತ್ರಿ ಸ್ಕೂಟರ್ ಆಕಸ್ಮಿಕವಾಗಿ ಬಿದ್ದಿದೆ. ಇನ್ನು ನೋಂದಣಿಯಾಗದ ಹೊಸ ಸ್ಕೂಟರ್‌ ಅನ್ನು ವಿನೋದ್ ಕುಮಾರ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.

ADVERTISEMENT

ಮೃತ ವಿನೋದ್ ಕುಮಾರ್ ಮೂಲತ: ಪೆರುಂಬಾಡಿಯ ನಿವಾಸಿ. ಎರಡು ತಿಂಗಳಿನಿಂದ ಬೆಂಗಳೂರಿನ ಕಂಪೆನಿ ಒಂದರಲ್ಲಿ ಕೆಲಸದಲ್ಲಿದ್ದು, ವಿವಾಹ ಸಮಾರಂಭಕ್ಕಾಗಿ ಮನೆಗೆ ಬರುತ್ತಿದ್ದರು.

ಗುತ್ತಿಗೆದಾರರು ಸೇತುವೆ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿವಾಗಿ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಅಪಾಯದ ಮುನ್ಸೂಚನೆ ಸೂಚಿಸುವ ಯಾವುದೇ ಫಲಕ, ಮುಂಜಾಗ್ರತೆ ವಹಿಸಿರಲಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.