ADVERTISEMENT

ಗೋಣಿಕೊಪ್ಪಲು ದಸರಾಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 6:35 IST
Last Updated 10 ಅಕ್ಟೋಬರ್ 2011, 6:35 IST

ಗೋಣಿಕೊಪ್ಪಲು:  ಸಂಜೆಯಾಯಿ ತೆಂದರೆ ಎಲ್ಲ  ದಾರಿಗಳು ದಸರೆಯ ಕಡೆಗೆ. ಅಲ್ಲಿ ಸಂಗೀತ, ಹಾಡು, ನೃತ್ಯ, ಭಾಷಣ ಆಲಿಸಿ ಮಧ್ಯರಾತ್ರಿಯ ನಂತರ ಮತ್ತೆ ಮರಳಿ ಮನೆಗೆ.  ಇದು ಗೋಣಿಕೊಪ್ಪಲು ದಸರಾ ಉತ್ಸವದಲ್ಲಿ ಕಳೆದ 9ದಿನಗಳಿಂದ ಕಂಡು ಬಂದ ದೃಶ್ಯ.

ನವರಾತ್ರಿ ಉತ್ಸವ ಇಲ್ಲಿನ ಪಟ್ಟಣವನ್ನು ಶೃಂಗರಿಸಲಾಗಿತ್ತು. ಜನತೆ ಪಟ್ಟಣ ಮೂಲೆ ಮೂಲೆಗಳಿಂದ ದಸರಾ ಉತ್ಸವ ನಡೆಯುತ್ತಿದ್ದ ಸರ್ಕಾರಿ ಪ್ರೌಢಶಾಲೆಯ ಮೈದಾನದತ್ತ  ಸಾಲುಗಟ್ಟಿ ಓಡಾಡುತಿದ್ದುದು ಸಾಮಾನ್ಯವಾಗಿತ್ತು.

ಮಕ್ಕಳು ಮಹಿಳೆಯರು, ಪುರುಷರು ಸಂಭ್ರಮದಿಂದ  ಸಾಗುತ್ತಿದ್ದರು. ನವರಾತ್ರಿ ದಸರಾ ಉತ್ಸವದ  ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಸಂಜೆ 6ರಿಂದ 7.30 ರವರೆಗೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಬಳಿಕ ಸಭಾ ಕಾರ್ಯಕ್ರಮ ನಡೆಯುತ್ತಿತ್ತು. ಅನಂತರ ಹೊರಗಿನ ಪ್ರಸಿದ್ಧ ಕಲಾವಿದರಿಂದ ಹಾಸ್ಯ, ಸಂಗೀತ, ಜಾದು, ನಾಟಕ ಮೊದಲಾದ  ಕಾರ್ಯಕ್ರಮ ಮೂಡಿಬರುತ್ತಿತ್ತು.

ನವರಾತ್ರಿ ಉತ್ಸವದಲ್ಲಿ ನಡೆದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ  ಎರಡು ಸಂಗೀತ ಕಾರ್ಯಕ್ರಮಗಳನ್ನು ಬಿಟ್ಟರೆ ಉಳಿದ ಎಲ್ಲವೂ ಉತ್ತಮವಾಗಿದ್ದವು. ಜನತೆ ಸಂಗೀತ ಕಾರ್ಯಕ್ರಮಕ್ಕೆ ಕಿಕ್ಕಿರಿದು ತುಂಬುತ್ತಿದ್ದರು. ಸಭಾ ಮಂಟಪವನ್ನು ಉತ್ತಮವಾಗಿ ನಿರ್ಮಿಸಲಾಗಿತ್ತು.

ಈ ದಸರಾ ಉತ್ಸವವನ್ನು 33ವರ್ಷಗಳ ಹಿಂದೆ ಎಂ.ಪಿ. ಪದ್ಮನಾಭ ಕಾಮತ್, ಎಂ.ಜಿ ಮೋಹನ್, ರಾಮಾಚಾರಿ, ಎಸ್. ಎಲ್. ಶಿವಣ್ಣ, ಪೊನ್ನಪ್ಪ ಮೊದಲಾದವರು ಸೇರಿ ಆಯೋಜಿಸಿದರು. ಮೊದಲು ಜನತೆಯಿಂದ ದೇಣಿಗೆ ಪಡೆದು ದಸರಾ ನಡೆಸಲಾಗುತ್ತಿತ್ತು. ಇದೀಗ ಸರ್ಕಾರವೇ ಅನುದಾನ  ನೀಡುತ್ತಿದೆ. ಇದರಿಂದ ಕಾರ್ಯಕ್ರಮದ ಆಯೋಜಕರಿಗೆ ಹಣಕಾಸಿನ ಸಮಸ್ಯೆ ಇಲ್ಲದಂತಾಗಿದೆ. ಇದರಿಂದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

 ಈ ಬಾರಿ ದಸರಾ  33ವರ್ಷಗಳ ಹಿಂದೆ ದಸರಾ ಆರಂಭಿಸಿದ ಹಿರಿಯರಾದ ರಾಮಚಾರಿ  ಹಾಗೂ ಎಸ್.ಎಲ್.ಶಿವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಸರಾ ಜನೋತ್ಸವದ ಅಂತಿಮ ದಿನ ನಡೆದ ಸ್ತಬ್ಧಚಿತ್ರ ಉತ್ತಮವಾಗಿತ್ತು. ರಾತ್ರಿ ನಡೆದ ವಿವಿಧ ಕಲಾ ಕೃತಿಕಗಳ ಮಂಟಪ ಹಾಗೂ ಸಂಗೀತ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.