ADVERTISEMENT

ಗೋದಾಮು ನಿರ್ಮಾಣಕ್ಕೆ ತೀರ್ಮಾನ

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 8:14 IST
Last Updated 18 ಸೆಪ್ಟೆಂಬರ್ 2013, 8:14 IST

ಕುಶಾಲನಗರ: ರೈತ ಸಹಕಾರ ಭವನದ ಆವರಣದಲ್ಲಿ  ಕುಶಾಲನಗರ ಕೃಷಿ  ವ್ಯವಸಾಯೋತ್ಪನ್ನ ವತಿಯಿಂದ 1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ  ಗೋದಾಮು ನಿರ್ಮಾಣ ಮಾಡಲು ಮಂಗಳವಾರ ನಡೆದ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ರೈತ ಸಹಕಾರ ಭವನದಲ್ಲಿ 2012-–13 ನೇ ಸಾಲಿನ 62ನೇ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ರಾಘವಯ್ಯ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.

ಸಂಘವು 2012-–13 ನೇ ಸಾಲಿನಲ್ಲಿ ವ್ಯಾಪಾರ ವಹಿವಾಟು ನಡೆಸಿ ರೂ 36,89,646.24 ವ್ಯಾಪಾರ ಲಾಭಗಳಿಸಿ, ರೂ 12,57,842.53 ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷರು ಹೇಳಿದರು.

ಪ್ರಸಕ್ತ ವರ್ಷ 758 ಸದಸ್ಯರ ಸಂಖ್ಯೆ ಇದ್ದು, ಅಪೂರ್ಣ ಷೇರುದಾರ ಸಂಖ್ಯೆ 291 ಇದೆ. ಸದಸ್ಯರ ಪಾಲು ಬಂಡವಾಳ ರೂ 3,44,160 ಇದೆ. ಜೊತೆಗೆ ರಾಜ್ಯ ಸರ್ಕಾರದ ಪಾಲು ಬಂಡವಾಳ ರೂ 14,18,750 ಇದೆ ಎಂದು ಅವರು ತಿಳಿಸಿದರು.

ಈ ವರ್ಷ ವಿವಿಧ ಸಾಲಗಳನ್ನು ನೀಡಲಾಗಿದ್ದು ಅದರಲ್ಲಿ ಚಿನ್ನಾಭರಣ ಸಾಲ ರೂ 5,34,89.460, ವೇತನಾಧಾರಿತ ಸಾಲ ರೂ 10,45,000, ನಿರಕು ಠೇವಣಿ ಮೇಲೆ  ನೀಡಿರುವ ಸಾಲ ರೂ 37,11,000, ಪಿಗ್ಮಿ ಸಾಲ ರೂ 4,49,850 ಸಾಲ ನೀಡಲಾಗಿದೆ ಎಂದರು.

ಸಂಘದ ಆವರಣದ ಜಾಗದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಶೈಕ್ಷಣಿಕ ಸಂಸ್ಥೆ ಹಾಗೂ ವೃತ್ತಿಪರ ಸಂಸ್ಥೆ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ-ನಿರ್ದೇಶಕರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿ ಎಲ್ಲ ಸದಸ್ಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಸಂಘದ ಬೆಳವಣಿಗೆ ದೃಷ್ಟಿಯಿಂದ ಸಹಕಾರಿ ಕಾಯ್ದೆ 97 ರನ್ವಯ ಎಲ್ಲ ಸದಸ್ಯರು ಕನಿಷ್ಠ ವ್ಯವಹಾರವನ್ನು ನಡೆಸಬೇಕು ಎಂದು ಹೇಳಿದಾಗ ಸದಸ್ಯರ ನಡುವೆ ಪರ ವಿರೋಧ ವ್ಯಕ್ತವಾಯಿತು.

ಸಂಘದ ಉಪಾಧ್ಯಕ್ಷ ಎಚ್.ಬಿ. ಚಂದ್ರಪ್ಪ, ಮಾಜಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಮಾಜಿ ಉಪಾಧ್ಯಕ್ಷ ಎಂ.ಕೆ. ಕುಶಾಲಪ್ಪ, ನಿರ್ದೇಶಕರಾದ ಡಿ.ಸಿ. ಶಿವಣ್ಣ, ಕೆ.ಎಸ್. ರತೀಶ್, ಕೆ.ಕೆ. ಗಿರಿಜ, ಎಚ್.ಕೆ. ಬೈರ, ಬಲ್ಲಾರಂಡ ಮಣಿಉತ್ತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.