ADVERTISEMENT

ಗ್ರಾ.ಪಂ. ಅವ್ಯವ್ಯಹಾರ: ತನಿಖೆ ವಿಳಂಬ ಆರೋಪ:ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 9:10 IST
Last Updated 22 ಮೇ 2012, 9:10 IST
ಗ್ರಾ.ಪಂ. ಅವ್ಯವ್ಯಹಾರ: ತನಿಖೆ ವಿಳಂಬ ಆರೋಪ:ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ
ಗ್ರಾ.ಪಂ. ಅವ್ಯವ್ಯಹಾರ: ತನಿಖೆ ವಿಳಂಬ ಆರೋಪ:ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ   

ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರಗಳು ನಡೆದಿದ್ದು, ರಾಜಕೀಯ ಒತ್ತಡದಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಅವರ ನೇತೃತ್ವದಲ್ಲಿ ತಾ.ಪಂ.ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಅಧಿಕಾರಿಯ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.

ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿಗಳು ಕಚೇರಿಯಲ್ಲಿರದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು, ಸಂತೆ ದಿನವಾದ ಸೋಮವಾರದಂದು ಅಧಿಕಾರಿಗಳು ಕಚೇರಿಯಲ್ಲಿ ಇರದಿದ್ದರೆ, ಗ್ರಾಮೀಣ ಭಾಗಗಳಿಂದ ಕೆಲಸ ಕಾರ್ಯಗಳಿಗೆ ಬರುವ ಕೃಷಿಕರು ಯಾರನ್ನು ಕೇಳಬೇಕು ಎಂದು ಪಕ್ಷದ ಪದಾಧಿಕಾರಿಗಳದ ಮಾಟ್ನಳ್ಳಿ ಸುರೇಶ್ ಹಾಗೂ ನಾಗರಾಜ್, ನಂತರ ಕಚೇರಿಗೆ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರನ್ನು ತೀವ್ರತರಾಟೆಗೆ ತೆಗೆದುಕೊಂಡರು.

ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಅವರುಗಳು ಪಂಚಾಯಿತಿಯಲ್ಲಿ ನಡೆದಿರುವ ಕೆಲವು ಅಕ್ರಮಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಈಗಾಗಲೇ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಅವರ ಸೂಚನೆ ಮೇರೆಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ. ಆದರೆ ತನಿಖಾಧಿಕಾರಿಗಳಾದ ಇಲ್ಲಿನ ಕಾರ್ಯನಿರ್ವಹಣಾಧಿಕಾರಿಗಳು ತನಿಖೆಯನ್ನು ಸಮರ್ಪಕವಾಗಿ ನಡೆಸದೆ, ವಿಳಂಬ ಮಾಡುತ್ತಿದ್ದಾರೆ ಎಂದು ನೇರುಗಳಲೆ ಗ್ರಾ.ಪಂ.ನ ಸದಸ್ಯ ಹಾಗೂ ಪ್ರಕರಣದ ದೂರುದಾರ ಧರ್ಮಪ್ಪ ಆರೋಪಿಸಿದರು.

ಕಳೆದ ನಾಲ್ಕು ತಿಂಗಳಿನಿಂದ ಪಂಚಾಯಿತಿಯ ಸಾಮಾನ್ಯ ಸಭೆಯನ್ನೇ ಕರೆದಿಲ್ಲ.  23 ತಿಂಗಳ ಆಡಳಿತ ಅವಧಿಯಲ್ಲಿ 6 ಪಿಡಿಓಗಳು  ಪಂಚಾಯಿತಿಗೆ ಬಂದು ಕೆಲಸ ನಿರ್ವಹಿಸಲಾಗದೆ ಜಾಗ ಖಾಲಿಮಾಡಿದ್ದಾರೆ. ಸಿಬ್ಬಂದಿಗಳಿಗೆ ಸಂಬಳವಿಲ್ಲದೆ ತಿಂಗಳುಗಳೆ ಕಳೆದಿವೆ. ಜನರ ಯಾವುದೆ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೂಡಲೆ ನೇರುಗಳಲೆ ಗ್ರಾಮ ಪಂಚಾಯಿತಿಯನ್ನು  ಸೂಪರ್ ಸೀಡ್  ಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಇಂದಿನಿಂದಲೆ ಪಿಡಿಓ ಒಬ್ಬರನ್ನು ಪಂಚಾಯಿತಿಗೆ ನೇಮಕ ಮಾಡುತ್ತೇನೆ. ಅವ್ಯವಹಾರದ ಬಗ್ಗೆ ತನಿಖೆ ಮಾಡಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿ        ಸಿದ್ದೇನೆ. ಎಂದು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸಮಜಾಯಿಸಿಕೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.